ವಿಶಾಖಪಟ್ಟಣ, ಜೂ. 16: ವಿಶಾಖಪಟ್ಟಣ ಜಿಲ್ಲೆಯ ಪಡೇರು ವಿಭಾಗದ ಪೆÇಲೀಸ್ ಸೂಪರಿಂಟೆಂಡೆಂಟ್ ಕೆ. ಶಶಿ ಕುಮಾರ್ ತಮ್ಮ ಅಧಿಕೃತ ನಿವಾಸದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಶಶಿ ಕುಮಾರ್ ಮನೆಯ ಹೊರಗೆ ಕಾವಲು ನಿಂತಿದ್ದ ಸೆಕ್ಯೂರಿಟಿ ಗಾರ್ಡ್‍ಗೆ ಮನೆಯೊಳಗಿನಿಂದ ಮೂರು ಗುಂಡು ಹಾರಾಟದ ಸದ್ದು ಕೇಳಿಬಂದಿದೆ. ಒಡನೆಯೇ ಮನೆಯೊಳಗೆ ಧಾವಿಸಿ ಹೋದಾಗ ಅಲ್ಲಿ ಶಶಿಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿರುವದು ಪತ್ತೆಯಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಶಶಿಕುಮಾರ್ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಗಿದೆ. ಆದರೆ ದಾರಿ ಮಧ್ಯದಲ್ಲೇ ಅವರು ಅಸುನೀಗಿದ್ದಾರೆ ಎಂದು ಹಿರಿಯ ಪೆÇಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ನಡೆದ ವೇಳೆ ಶಶಿಕುಮಾರ್ ಅವರು ತಮ್ಮ ಮನೆಯಲ್ಲಿ ಒಂಟಿಯಾಗಿದ್ದರು. ಮೂಲತಃ ತಮಿಳುನಾಡಿನ ಸೇಲಂ ನವರಾಗಿರುವ ಶಶಿ ಕುಮಾರ್ ಅವರು 2012ರ ಐಪಿಎಸ್ ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅವರನ್ನು 2015ರ ಡಿಸೆಂಬರ್ 31ರಂದು ಪಡೇರು ವಿಭಾಗಕ್ಕೆ ನಿಯೋಜಿಸಲಾಗಿತ್ತು. ಪಡೇರು ವಿಭಾಗದಲ್ಲಿ ವ್ಯಾಪಕವಾಗಿದ್ದ ಗಾಂಜಾ ಬೆಳೆಯುವಿಕೆ ಮತ್ತು ಮಾರಾಟವನ್ನು ಹತ್ತಿಕ್ಕುವಲ್ಲಿ ಶಶಿಕುಮಾರ್ ಬಹುಮಟ್ಟಿಗೆ ಸಫಲರಾಗಿದ್ದರು.