ಮಡಿಕೇರಿ, ನ. 25: ಮಾದಾಪುರದಲ್ಲಿ ತೋಟಗಾರಿಕಾ ಇಲಾಖೆಗೆ ಸೇರಿದ ಸುಮಾರು 300 ಏಕರೆ ಜಾಗ ಕಾಡು ಆವರಿಸಿ ಪಾಳು ಬಿದ್ದಂತಾಗಿರುವ ಕುರಿತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೇಳಿದ್ದ ಪ್ರಶ್ನೆ ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚೆಗೊಳಪಟ್ಟಿತು.300 ಏಕರೆ ಜಾಗ ಕಾಡು ಸೇರಿದ್ದು, ಬೇರೆ ಚಟುವಟಿಕೆಗೆ ನೀಡುವಂತೆ ರಂಜನ್ ಕೇಳಿದ್ದು ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪಿಸುವ ಕುರಿತು ಪ್ರಸ್ತಾಪಿಸಿದರು. ಇದರ ಬದಲು ಆಶ್ರಯ ಮನೆ ನಿರ್ಮಾಣಕ್ಕೆ ಒದಗಿಸುವಂತೆ ಶಾಸಕರು ಕೇಳಿದಾಗ ಸರಕಾರಿ ಕಟ್ಟಡ ಅಥವಾ ಸರಕಾರದ ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ಜಾಗ ಒದಗಿಸ ಲಾಗುವದು ಎಂದು ಸಚಿವರು ಹೇಳಿದರು.ಜಿಲ್ಲೆಯ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಈ ಬಗ್ಗೆ ದೃಢೀಕರಣ ಪತ್ರ ನೀಡಿದಿರುವ ಕುರಿತು ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಶ್ನೆ ಕಳುಹಿಸಿದ್ದು, ಇದೂ ಇಂದು ಚರ್ಚೆಗೆ ಬಂದಿತು. ಬೋಪಯ್ಯ ಅವರ ಅನುಪಸ್ಥಿತಿಯಲ್ಲಿ ಶಾಸಕ ರಂಜನ್ ಅವರು ಈ ಬಗ್ಗೆ ಗಮನ ಸೆಳೆದು ಜಿಲ್ಲೆಯ ಸಣ್ಣ ಹಾಗೂ ಅತೀ ಸಣ್ಣ ಕಾಫಿ ಬೆಳೆಗಾರರು ಇದರಿಂದ ಸೌಲಭ್ಯ ವಂಚಿತರಾಗುತ್ತಿದ್ದಾ ರೆಂದರು. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ಚರ್ಚೆಯ ಬಳಿಕ ನಿರ್ಧಾರ ಕೈಗೊಳ್ಳುವದಾಗಿ ಸಚಿವ ಕಾಗೋಡು ತಿಮ್ಮಪ್ಪ ಭರವಸೆಯಿತ್ತರು.