ಸೋಮವಾರಪೇಟೆ, ನ. 17: ವಿಶ್ವದಾದ್ಯಂತ ಹರಿದು ಹಂಚಿ ಹೋಗಿರುವ ತುಳು ಭಾಷಿಕರನ್ನು ಒಂದೆಡೆ ಸೇರಿಸಿ ಐತಿಹಾಸಿಕ ಸಮ್ಮೇಳನ ನಡೆಸಲು ನೆರೆಯ ಕಾಸರಗೋಡಿನ ಬದಿಯಡ್ಕದಲ್ಲಿ ಸಕಲ ಸಿದ್ಧತೆ ನಡೆಸಲಾಗಿದ್ದು, ತುಳು ಸಂಸ್ಕøತಿ ಬಿಂಬಿಸುವ ರಥಯಾತ್ರೆ ತಾ.18ರಂದು ಜಿಲ್ಲಾಕೇಂದ್ರ ಮಡಿಕೇರಿಗೆ ಆಗಮಿಸುವ ರಥಯಾತ್ರೆಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಾಲೂಕು ತುಳುವೆರೆ ಜನಪದ ಕೂಟದ ಅಧ್ಯಕ್ಷ ದಿನೇಶ್ ಕುಲಾಲ್ ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ಡಿಸೆಂಬರ್ 9 ರಿಂದ 13ರವರೆಗೆ ಕಾಸರಗೋಡಿನ ಬದಿಯಡ್ಕ ಗ್ರಾಮದಲ್ಲಿ ವಿಶ್ವ ತುಳುವೆರೆ ಆಯನೊ-ತುಳುನಾಡ್ ರಥಯಾತ್ರೆ, ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಚಾರಾರ್ಥ ಈಗಾಗಲೇ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆ ತಾ. 18ರಂದು ಮಡಿಕೇರಿಗೆ ಆಗಮಿಸಲಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ರಥಯಾತ್ರೆಯನ್ನು ಸ್ವಾಗತಿಸಿ ಬೃಹತ್ ಮೆರವಣಿಗೆ ನಡೆಸಲು ಐತಪ್ಪ ರೈ ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಇರುವ ತುಳು ಭಾಷಿಕರು ಭಾಗವಹಿಸಲಿದ್ದಾರೆ ಎಂದು ದಿನೇಶ್ ತಿಳಿಸಿದರು.
5 ದಿನಗಳ ಕಾಲ ಬದಿಯಡ್ಕದಲ್ಲಿ ನಡೆಯುವ ಸಮ್ಮೇಳನದಲ್ಲಿ ತುಳುನಾಡಿನ ಬಹುಭಾಷಾ ಸಂಗಮ, ದೈವಾರಾಧನೆ, ಸಂಸ್ಕøತಿ-ಆಚಾರ ವಿಚಾರ, ಜನಪದ ಕ್ರೀಡಾಕೂಟ, ತುಳು ಸಿನಿಮಾ, ನಾಟಕ, ಯಕ್ಷಗಾನ ಕಲಾವಿದರ ಸಂಗಮ, ರಾಷ್ಟ್ರೀಯ ಜಾನಪದ ಉತ್ಸವ, ಹೊರನಾಡು ಮತ್ತು ವಿದೇಶಿ ತುಳುವೆರ ಸಮ್ಮೇಳನ, ಕೃಷಿ, ಸಾಹಿತ್ಯ ಸಮ್ಮೇಳನ, ವಿವಿಧ ಗೋಷ್ಠಿ, ಜಾನಪದ ಸಾಂಸ್ಕøತಿಕ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಪುಸ್ತಕ ಪ್ರದರ್ಶನ, ಜಾನಪದ ಕ್ರೀಡೆ, ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ 4 ಲಕ್ಷಕ್ಕೂ ಅಧಿಕ ತುಳು ಭಾಷಿಕರು ಭಾಗವಹಿಸುವ ನಿರೀಕ್ಷೆಯಿದೆ. ತುಳು ಭಾಷಿಕರನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯಿಂದಲೂ ಸಾವಿರಾರು ಮಂದಿ ತುಳುಭಾಷಿಕರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ತುಳುವೆರೆ ಜನಪದ ಕೂಟದ ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ದಾಮೋದರ್, ಇಂದಿರಾ, ಸಂಚಾಲಕ ಸತೀಶ್ ಕುಂದರ್, ಸಹ ಕಾರ್ಯದರ್ಶಿ ಪ್ರಶಾಂತ್, ಮಿಥುನ್ ಅವರುಗಳು ಉಪಸ್ಥಿತರಿದ್ದರು.