ಪೊನ್ನಂಪೇಟೆ, ಜ. 13: ಕೊಡಗಿನ ಪೂರ್ವಭಾಗದ ಗಡಿಯಲ್ಲಿರುವ ತಿತಿಮತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆರಂಭಗೊಂಡು 2016ಕ್ಕೆ ಯಶಸ್ವಿ 100 ವರ್ಷ ಪೂರ್ಣಗೊಂಡಿದೆ. ಆದ್ದರಿಂದ ಪ್ರಸಕ್ತ ವರ್ಷದ ಅಕ್ಟೋಬರ್‍ನಲ್ಲಿ ಎಲ್ಲರ ಪೂರ್ಣ ಸಹಕಾರದೊಂದಿಗೆ ಶಾಲೆಯ ಶತಮಾನೋತ್ಸವ ಸಂಭ್ರಮವನ್ನು ಅದ್ಧೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನೆÀ್ನಲೆಯಲ್ಲಿ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಗೌರವಾಧ್ಯಕ್ಷರಾಗಿರುವ ಮಾಜಿ ಸಚಿವೆ ಸುಮಾವಸಂತ್ ಹೇಳಿದ್ದಾರೆ.

ತಿತಿಮತಿಯ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗಿರುವ ತಿತಿಮತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯು ಯಶಸ್ವಿ 100 ವರ್ಷಗಳನ್ನು ಪೂರೈಸಿರುವದು ನಿಜಕ್ಕೂ ಹೆಮ್ಮೆಯ ವಿಚಾರ. ಈ ನೆನಪಿಗಾಗಿ ಶಾಲೆಯ ಶತಮಾನೋತ್ಸವ ಆಚರಣೆಯನ್ನು ಯೋಜನಾಬದ್ಧವಾಗಿ ಆಚರಿಸು ವಂತಾಗಲು ಹಳೆ ವಿದ್ಯಾರ್ಥಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಇದೀಗ ಸದಸ್ಯತ್ವವನ್ನು ವ್ಯಾಪಕವಾಗಿ ವಿಸ್ತರಿಸುವ ಸಲುವಾಗಿ ಸಂಚಾಲನ ಸಮಿತಿಯೊಂದನ್ನು ಚೆಪ್ಪುಡಿರ ರಾಮಕೃಷ್ಣ ಅವರ ನೇತೃತ್ವದಲ್ಲಿ ರಚಿಸಲಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ಹಳೆ ವಿದ್ಯಾರ್ಥಿಗಳಿದ್ದು, ಅವರನ್ನೆಲ್ಲಾ ಒಟ್ಟು ಸೇರಿಸಿ ಸಂಘಟಿತವಾಗಿ ಶತಮಾನೋತ್ಸವ ಆಚರಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿಗಳ ಪೈಕಿ ಬಹುತೇಕರು ವಿವಿಧೆಡೆಗಳಲ್ಲಿ ನೆಲೆಸಿದ್ದಾರೆ. ಅವರನ್ನೆಲ್ಲಾ ಖುದ್ದಾಗಿ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಮತ್ತೆ ಕೆಲವರ ಮಾಹಿತಿಯ ಕೊರತೆ ಇದೆ. ಆದ್ದರಿಂದ ತಿತಿಮತಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಲಾಗುವದು. ಈ ವರ್ಷದ ಮಾರ್ಚ್ 31ರವರೆಗೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆಯಲು ಕಾಲಾವಕಾಶ ನೀಡಲಾಗಿದ್ದು, ಆ ನಂತರ ಹಳೆ ವಿದ್ಯಾರ್ಥಿ ಸಂಘವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಶತಮಾನೋತ್ಸವ ಆಚರಣೆಯ ರೂಪುರೇಷೆಯನ್ನು ಅಂತಿಮಗೊಳಿಸಲಾಗುವದು. ಅದುವರೆಗೂ ಸಂಚಾಲನಾ ಸಮಿತಿ ಮುಂದುವರಿಯಲಿದ್ದು, ಮಾಸಿಕ 2 ಸಭೆಗಳನ್ನು ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಲಾಗುವದು ಎಂದು ಸುಮಾ ವಸಂತ್ ಅವರು ಮಾಹಿತಿ ನೀಡಿದರು.

ಹಳೆ ವಿದ್ಯಾರ್ಥಿ ಸಂಘದ ಸಂಚಾಲನಾ ಸಮಿತಿಯ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಮಾತನಾಡಿ, 1916ರಲ್ಲಿ ತಿತಿಮತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹುಲ್ಲಿನ ಗುಡಿಸಲಿನಲ್ಲಿ ಮೊದಲಿಗೆ ಆರಂಭಗೊಂಡಿತು. ಬಳಿಕ ತಿತಿಮತಿಯ ಮರಾಠಿ ಮಂಜಮ್ಮ ಅವರು ಶಾಲೆಗೆ 3 ಏಕ್ರೆ ಜಾಗ ಮತ್ತು 1 ಏಕ್ರೆ ಗದ್ದೆಯನ್ನು ಉದಾರವಾಗಿ ನೀಡಿದರು. ಇವರು ದಾನವಾಗಿ ನೀಡಿದ 3 ಏಕ್ರೆ ಜಾಗದಲ್ಲಿ 1925ರಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಈ ಶಾಲೆಯನ್ನು ಸ್ಥಳಾಂತರಿಸಲಾಯಿತು. ಆ ನಂತರ 1952ರಲ್ಲಿ ಮನೆಯಪಂಡ ದಿ. ಎನ್. ಗಣಪತಿ ಅವರು ಕಟ್ಟಡವೊಂದನ್ನು ಶಾಲೆಗೆ ಉದಾರವಾಗಿ ಕಟ್ಟಿಸಿದ್ದರು. 1989ರಲ್ಲಿ ದಿ. ಚೆಪ್ಪುಡಿರ ಅಯ್ಯಪ್ಪ ಅವರು ಶಾಲೆಗಾಗಿ ಸಭಾಂಗಣವನ್ನು ಉದಾರವಾಗಿ ಕಟ್ಟಿಸಿದ್ದರು ಎಂದು ವಿವರ ನೀಡಿದರು.

ಶತಮಾನೋತ್ಸವ ಆಚರಣೆಯ ಸವಿನೆನಪಿಗಾಗಿ ಸಾರ್ವಜನಿಕ ಉಪಯೋಗಕ್ಕೆ ಯೋಗ್ಯವಾಗುವ ಶಾಶ್ವತ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುವ ಉದ್ದೇಶವಿದೆ. ಅಲ್ಲದೆ ಈ ಶಾಲೆಯಲ್ಲಿ ಇದುವರೆಗೂ ಸೇವೆ ಸಲ್ಲಿಸಿರುವ ಎಲ್ಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಹಳೆಯ ವಿದ್ಯಾರ್ಥಿ ಸಂಘ ಕೇವಲ ಶತಮಾನೋತ್ಸವ ಆಚರಣೆಗೆ ಮಾತ್ರ ಸೀಮಿತವಾಗದೆ ಮುಂದೆ ಪ್ರತಿ ವರ್ಷ ಶಾಲೆಗೆ ಅಗತ್ಯವಿರುವ ಕಾರ್ಯ ಕ್ರಮಗಳನ್ನು ರೂಪಿಸಲಾಗುವದು. ಇದಕ್ಕೆ ಹಳೆ ವಿದ್ಯಾರ್ಥಿಗಳ ಮತ್ತು ಸ್ಥಳೀಯರ ಸಹಕಾರ ಅಗತ್ಯವಿದೆ. ಈ ಎಲ್ಲಾ ಯೋಜನೆಗಳಿಗೆ ತಗಲುವ ಹಣಕಾಸು ವೆಚ್ಚಕ್ಕೆ ಹಳೆ ವಿದ್ಯಾರ್ಥಿಗಳನ್ನು ಮತ್ತು ದಾನಿಗಳನ್ನೆ ಅವಲಂಬಿಸಿದೆ ಎಂದು ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆಯುವವರು ಮೊ-9448156636, 8762962464, ಇವರನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲನಾ ಸಮಿತಿಯ ಪಧಾದಿಕಾರಿಗಳಾದ ಚೆಪ್ಪುಡಿರ ಎ. ಕಾರ್ಯಪ್ಪ ಮತ್ತು ಪಾಲೆಂಗಡ ಮನು ನಂಜಪ್ಪ ಅವರು ಉಪಸ್ಥಿತರಿದ್ದರು.

- ರಫೀಕ್ ತೂಚಮಕೇರಿ