ಗೋಣಿಕೊಪ್ಪಲು, ಡಿ. 4: ಯುವ ಸಬಲೀಕರಣ ಮತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕೂಟ, ಇಂಡಿಯನ್ ಯುವ ಒಕ್ಕೂಟ ಹಾಗೂ ಭಾರತಿ ಯುವಕ-ಯುವತಿ ಮಂಡಳಿ ವತಿಯಿಂದ ತಿತಿಮತಿಯಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಇವರು, ಯುವಶಕ್ತಿ ಜಾಗೃತಗೊಂಡರೆ ಸಮಾಜ ಸುಧಾರಣೆ ಸಾಧ್ಯ. ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮ ಸಹಕಾರಿ ಯಾಗಿದೆ. ಯುವಜನತೆ ಈ ರೀತಿಯ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಮಾತನಾಡಿ, ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಸಂಘಗಳು ಮುಂದಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆಗೆ ಸ್ಪೂರ್ತಿ ನೀಡುವಂತಹ ಕಾರ್ಯಕ್ರಮ ನಡೆಯಬೇಕು ಎಂದರು.
ತಾಲೂಕು ಮಟ್ಟದಿಂದ ಆಯ್ಕೆಗೊಂಡ 50ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪÀರ್ಧೆಯಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ತೋರಿದರು.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಕೋಲಾಟ, ಜಾನಪದ ನೃತ್ಯ, ರಾಗಿ ಬೀಸುವ ಪದ, ಸೋಬಾನೆ ಪದ, ಭಜನೆ, ಸಮೂಹಗೀತೆ ಎಂಬ 11 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಪಂಕಜ, ಗ್ರಾ.ಪಂ. ಅಧ್ಯಕ್ಷ ಶಿವ ಕುಮಾರ್, ಸದಸ್ಯರಾದ ಚುಬ್ರು, ರಜನಿ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ, ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ಮಡಿಕೇರಿ ಅಧ್ಯಕ್ಷ ನವೀನ್ ದೇರಳೆ, ಸೋಮವಾರಪೇಟೆ ಅಧ್ಯಕ್ಷ ರವಿ ಉಪಸ್ಥಿತರಿದ್ದರು.
ಪ್ರಮೋದ್ ಗಣಪತಿ ಸ್ವಾಗತಿಸಿದರು. ವಿನೂತ್ ಮೂಡುಗದ್ದೆ ಹಾಗೂ ರೇಖಾ ಶ್ರೀಧರ್ ನಿರೂಪಿಸಿದರು, ಗಿರೀಶ್ ವಂದಿಸಿದರು.