ಗೋಣಿಕೊಪ್ಪಲು, ನ. 26: ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾ. 28 ರಂದು ನೋಟು ರದ್ಧತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಗುವದು ಎಂದು ಗೋಣಿಕೊಪ್ಪಲು ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕೇಳಿ ಬಂದ್ ನಡೆಸಬೇಕಿಲ್ಲ. ಬಡವರು, ಮಧ್ಯಮ ವರ್ಗದವರು ಹಾಗೂ ವ್ಯಾಪಾರಿಗಳು ಹಣ ರದ್ಧತಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ವತಿಯಿಂದ ಬಂದ್ ನಡೆಸದೆ, ತಹಶೀಲ್ದಾರ್ಗೆ ಮನವಿ ಸಲ್ಲಿಸುವ ಮೂಲಕ ವಿರೋಧವನ್ನು ವ್ಯಕ್ತಪಡಿಸಲಾಗುವದು ಎಂದು ತಿಳಿಸಿದರು.
ನೋಟು ರದ್ಧತಿ ಮುನ್ನ ಯಾವದೇ ಪೂರ್ವಬಾವಿ ಯೋಜನೆ ರೂಪಿಸಿಲ್ಲ. ಪರಿಣಾಮ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಜೆ.ಕೆ. ಸೋಮಣ್ಣ, ಮುರುಗ, ಮಂಜುಳ ಹಾಗೂ ಕಲಿಮುಲ್ಲಾ ಉಪಸ್ಥಿತರಿದ್ದರು.