ಕುಶಾಲನಗರ, ಆ 15: ಕುಶಾಲನಗರ ಕನ್ನಿಕಾ ವಿವಿದೋದ್ದೇಶ ಸಹಕಾರ ಸಂಘದ ನೂತನ ಕಛೇರಿ ಕಟ್ಟಡದ ಉದ್ಘಾಟನೆ ಈ ತಿಂಗಳ 25 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ಆರ್. ರವಿಕುಮಾರ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಅಂದಾಜು 60 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಪೂರ್ವಭಾವಿಯಾಗಿ ಇದೇ ತಿಂಗಳ 14 ರಿಂದ ಎರಡು ದಿನಗಳ ಕಾಲ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ. 16 ಮತ್ತು 17 ರಂದು ಕುಶಾಲನಗರದ ಪ್ರಮುಖ ಸ್ಥಳಗಳಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 19 ರಂದು ಸ್ಥಳೀಯ ಆಯ್ದ ಶಾಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಜೀವನ ಮಾಹಿತಿ ಕಾರ್ಯಗಾರ ನಡೆಯಲಿದೆ. ತಾ. 21 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಸ್ಥಳೀಯ ವಾಸವಿ ಮಹಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು.
ತಾ. 22 ರಂದು ಸ್ಥಳೀಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಜೀವನ ಮಾಹಿತಿ ಕಾರ್ಯಾಗಾರ ಮತ್ತು ಸಹಕಾರಿ ಕ್ಷೇತ್ರದ ಬಗ್ಗೆ ಮಾಹಿತಿ ಒದಗಿಸಲಾಗುವದು. ತಾ.23 ರಂದು ಸ್ಥಳೀಯ ವಾಸವಿ ಮಹಲ್ನಲ್ಲಿ ವಾಸವಿ ಯುವಜನ ಸಂಘದ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ನೂತನ ಕಟ್ಟದ ಉದ್ಘಾಟನೆ ದಿನದಂದು ಕುಶಾಲನಗರ ಸರಕಾರಿ ಆಸ್ಪತ್ರೆ ಆವರಣದಲ್ಲಿ ಸಂಘದ ವತಿಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಶಂಕುಸ್ಥಾಪನೆ ನೆರವೇರಿಸಲಾಗುವದು ಎಂದು ತಿಳಿಸಿದ ರವಿಕುಮಾರ್, ಅಂದಾಜು 7 ಲಕ್ಷ ರೂಗಳ ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕನ್ನಿಕಾ ವಿವಿದೋದ್ದೇಶ ಸಹಕಾರ ಸಂಘ 2002 ರಲ್ಲಿ ಸ್ಥಾಪನೆಗೊಂಡಿದ್ದು ಒಟ್ಟು 665 ಸದಸ್ಯರನ್ನು ಒಳಗೊಂಡಂತೆ ಕಳೆದ ಸಾಲಿನಲ್ಲಿ 33 ಕೋಟಿ ರೂಗಳ ವ್ಯಾಪಾರ ವಹಿವಾಟು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ಸಾಲಿನಲ್ಲಿ 41 ಲಕ್ಷ ರೂಗಳ ಲಾಭ ಬಂದಿರುವದಾಗಿ ರವಿಕುಮಾರ್ ಮಾಹಿತಿ ನೀಡಿದರು.
ಇದೇ ಸಂದರ್ಭ ಹಿರಿಯ ಸಹಕಾರಿಗಳಾಗಿದ್ದ ದಿವಂಗತ ಎಸ್.ಆರ್. ವರದರಾಜ ಶೆಟ್ಟಿ ಅವರ ಸ್ಮರಣಾರ್ಥ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಅಮೃತ್ರಾಜ್, ನಿರ್ದೇಶಕರುಗಳಾದ ಪಿ.ಎಸ್. ಪ್ರಶಾಂತ್, ಪಿ.ಆರ್.ಮಂಜುನಾಥ್, ಬಿ.ಆರ್.ನಟರಾಜ್, ವೈಶಾಖ್, ಬಿ.ಎಂ.ಮುರಳೀಧರ್, ಜಯಶ್ರೀ ನಾಗೇಶ್, ಚಿತ್ರಾ ರಮೇಶ್, ಬಿ.ಎಸ್. ಮಂಜುನಾಥ್ ಇದ್ದರು.