ಮಡಿಕೇರಿ, ನ. 13: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ನಡೆಸುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 26 ನೇ ವರ್ಷದ “ಕೊಡವ ನ್ಯಾಷನಲ್ ಡೇ” ಕಾರ್ಯಕ್ರಮ ನ.24 ರಂದು ನಗರದಲ್ಲಿ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಬೇಡಿಕೆಗಳು ಈಡೇರುವವರೆಗೆ ಶಾಂತಿಯುತ ಹೋರಾಟ ಮುಂದುವರಿಯಲಿದೆ. ನಗರದ ಗಾಂಧಿ ಮೈದಾನದಲ್ಲಿ ನ.24 ರಂದು 26 ನೇ ವಾರ್ಷಿಕೋತ್ಸವ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯುವದಕ್ಕಾಗಿ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಲಾಗುವದೆಂದು ಹೇಳಿದರು. ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶವೆಂದು ಕೊಡಗನ್ನು ಘೋಷಣೆ ಮಾಡಬೇಕು, ಕೊಡವರನ್ನು ಸಂವಿಧಾನದ 340, 342ನೇ ವಿಧಿಯಂತೆ ಷೆಡ್ಯೂಲ್ ಪಟ್ಟಿಗೆ ಸೇರಿಸುವದರೊಂದಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕ ಸ್ಥಾನಮಾನ ನೀಡಬೇಕು, ಕೊಡವ ಭಾಷೆಯನ್ನು 8ನೇ ಷೆಡ್ಯೂಲ್‍ಗೆ ಸೇರಿಸಬೇಕು, 371ನೇ ವಿಧಿ ಪ್ರಕಾರ ಇನ್ನರ್ ಲೈನ್ ಪರ್ಮಿಟ್ ಮೂಲಕ ಭದ್ರತೆ ಒದಗಿಸ ಬೇಕು, ಕೊಡವರ ಸಾಂಪ್ರದಾಯಿಕ ಭೂಮಿಯನ್ನು ಪರರ ಸ್ವತ್ತಾಗದಂತೆ ಸಂರಕ್ಷಿಸಬೇಕು, ಕೊಡವರಿಗೆ ಮತ್ತು ಜಮ್ಮಾ ಹಿಡುವಳಿದಾರರಿಗೆ ಬಂದೂಕು ವಿನಾಯ್ತಿ ಹಕ್ಕನ್ನು ಅಭಾದಿತವಾಗಿ ಮುಂದುವರಿಸಬೇಕು, ಟಿಪ್ಪು ಸುಲ್ತಾನನಿಂದ ಕೊಡವರ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿರುವ ದೇವಟ್ ಪರಂಬು ಪ್ರದೇಶದಲ್ಲಿ ಸ್ಮಾರಕ ನಿರ್ಮಿಸಬೇಕು, ಕೊಡವ ಜನಾಂಗಕ್ಕೆ ಯಹೂದಿ ಪಾರ್ಸಿ, ಸಿಂಧಿ, ಏಜಿದಿ, ಕುರ್ದಿ, ಬಲೂಚಿ, ಪಸ್ತೂನ್ ಮತ್ತು ಕಾಶ್ಮೀರಿ ಪಂಡಿತರಂತೆ ಜಾಗತಿಕ ಮಾನ್ಯತೆ ದೊರೆಯಬೇಕು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಅಪಾಯ ತಂದೊಡ್ಡುವ ಶಕ್ತಿಗಳು ಕೊಡಗನ್ನು ಅಡಗು ತಾಣವಾಗಿ ಪರಿವರ್ತಿಸಿ ಕೊಳ್ಳುವ ಸಾಧ್ಯತೆಗಳಿದ್ದು, ಎನ್‍ಐಎ ಮತ್ತು ರಾ ಏಜೆನ್ಸಿಯನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು, ಸೇರಿದಂತೆ 11 ಹಕ್ಕೊತ್ತಾಯಗಳನ್ನು ಮಂಡಿಸ ಲಾಗುವದೆಂದು ನಾಚಪ್ಪ ತಿಳಿಸಿದರು.