ಮಡಿಕೇರಿ, ಡಿ.20 : ದಿಡ್ಡಳ್ಳಿಯ ನಿರಾಶ್ರಿತರಿಗೆ ಅವರಿರುವ ಪ್ರದೇಶದಲ್ಲೇ ನಿವೇಶನ ಒದಗಿಸಬೇಕು ಸೇರಿದಂತೆ ಜಿಲ್ಲೆಯ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ತಾ.23 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಕೇಂದ್ರ ಸಮಿತಿಯ ಸದಸ್ಯ ಸಿರಿಮನೆ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಡ್ಡಳ್ಳಿಯ ಗಿರಿಜನರ ಹೋರಾಟಕ್ಕೆ ಆಡಳಿತ ವ್ಯವಸ್ಥೆ ಮಂಡಿಯೂರಿದ್ದು, ಇದಕ್ಕೆ ಸರ್ವ ಜನರು ನೀಡಿದ ಬೆಂಬಲವೇ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ನೀಡಿದ ಭರವಸೆಯಂತೆ ಮುಂದಿನ ಮೂರು ತಿಂಗಳ ಒಳಗಾಗಿ ದಿಡ್ಡಳ್ಳಿ ಗಿರಿಜನರಿಗೆ ಅವರಿರುವ ಪ್ರದೇಶದಲ್ಲೆ ನಿವೇಶನ ಮತ್ತು ವಸತಿ ನೀಡಬೇಕೆಂದ ಅವರು ಅಲ್ಲಿಯವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಗಿರಿಜನರ ಗುಡಿಸಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಆರ್‍ಎಫ್‍ಒ, ಎಸಿಎಫ್, ಪೆÇಲೀಸ್ ಅಧಿಕಾರಿಗಳು ಹಾಗೂ ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಮಾನತುಗೊಳಿಸಬೇಕು ಮತ್ತು ದಿಡ್ಡಳ್ಳಿ ಗಿರಿಜನರಿಂದ 6.80 ಲಕ್ಷ ಹಣವನ್ನು ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿರಿಮನೆ ನಾಗರಾಜ್ ಇದೇ ಸಂದರ್ಭ ಆಗ್ರಹಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಮೂರು ವರ್ಷಗಳ ಹಿಂದೆ ತಮ್ಮ ಬಜೆಟ್ ಭಾಷಣದ ಸಂದರ್ಭ ಗಿರಿಜನರ ಸಮಸ್ಯೆಗಳ ಬಗೆಹರಿಕೆಗೆ ‘ಪರಿಹಾರ ಮತ್ತು ಪುನರ್ವಸತಿ ಕೇಂದ್ರ’ ತೆರೆಯುವ ಪ್ರಸ್ತಾಪ ಮಾಡಿದ್ದು, ಅದು ಇಂದಿಗೂ ಕಾರ್ಯಗತವಾಗಿಲ್ಲ. ಆದಷ್ಟು ಶೀಘ್ರ ಅದನ್ನು ಕಾರ್ಯಗತಗೊಳಿಸಬೇಕೆಂದು ಒತ್ತಾಯಿಸಿದರು.
ಸಮಿತಿಯ ಪ್ರಮುಖ ನಿರ್ವಾಣಪ್ಪ ಮಾತನಾಡಿ, ತಾ.23 ರಂದು ಬೆಳಗ್ಗೆ ನಗರದ ಗದ್ದುಗೆಯಿಂದ ಗಾಂಧಿ ಮೈದಾನದವರೆÀಗೆ ಬೃಹತ್ ಜಾಥ ನಡೆಯಲಿದ್ದು, ಬಳಿಕ ಮೈದಾನದಲ್ಲಿ ಸಮಾವೇಶ ನಡೆಯಲಿದೆಯೆಂದು ತಿಳಿಸಿದರು. ದಿಡ್ಡಳ್ಳಿ ಗಿರಿಜನರ ಸಮಸ್ಯೆಗಳೊಂದಿಗೆ ಜಿಲ್ಲಾ ವ್ಯಾಪ್ತಿಯ ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿರುವ ಗಿರಿಜನ ಸಮೂಹವನ್ನು ಸಂಕಷ್ಟದಿಂದ ಪಾರು ಮಾಡಿ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಸಂಸದ ಪ್ರತಾಪ ಸಿಂಹ ಅವರು ಆರಂಭದಲ್ಲಿ ಗಿರಿಜನರು ಗುಡಿಸಲುಗಳನ್ನು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿಕೊಂಡಿರು ವದರಿಂದ ಅಲ್ಲೆ ಮತ್ತೆ ನಿವೇಶನ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಆದರೆ, ಸ್ಥಳಕ್ಕಾಗಮಿಸಿದ ಬಳಿಕ ಗಿರಿಜನರನ್ನು ಓಲೈಸುವ ಪ್ರಯತ್ನ ನಡೆಸಿದರು. ಇವೆಲ್ಲವು ರಾಜಕಾರಣಿಗಳ ನಾಟಕವೆಂದು ಆರೋಪಿಸಿದರು.
ಪ್ರಮುಖರಾದ ಪಿ.ಆರ್.ಭರತ್ ಮಾತನಾಡಿ, ಆದಿವಾಸಿಗಳ ಹಕ್ಕಿನ ಪ್ರಶ್ನೆಯನ್ನು ಮುಂದಿರಿಸಿಕೊಂಡು ಸಾಕಷ್ಟು ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ. ಸೂಕ್ತ ನಿವೇಶನವನ್ನು ಒದಗಿಸಿ ಸೂರು ಕಲ್ಪಿಸಿದಾಗ ಮಾತ್ರ ಗಿರಿಜನರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯವೆಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಂದಗಲ್ ಶ್ರೀನಿವಾಸ್, ಅಪ್ಪಾಜಿ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷರಾದ ಅಮಿನ್ ಮೊಹಿಸಿನ್, ಉಪಸ್ಥಿತರಿದ್ದರು.