ಸೋಮವಾರಪೇಟೆ, ಜು. 20: ತುಳು ಭಾಷಿಕರ ಕಲೆ, ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ತುಳುವೆರ ಜನಪದ ಕೂಟ ಅಸ್ತಿತ್ವಕ್ಕೆ ಬಂದಿದ್ದು, ಸೋಮವಾರಪೇಟೆ ತಾಲೂಕು ಘಟಕವನ್ನು ತಾ. 26 ರಂದು ಇಲ್ಲಿನ ಮಾನಸ ಸಭಾಂಗಣದಲ್ಲಿ ರಚಿಸಲಾಗುವದು ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ.ಎಂ. ರವಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 26 ರಂದು ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು, ತಾಲೂಕಿನ ಎಲ್ಲಾ ತುಳು ಭಾಷಿಕರು ಆಗಮಿಸಲಿದ್ದಾರೆ. ಈ ಸಂದರ್ಭ ಸುದೀರ್ಘ ಚರ್ಚೆ ನಡೆಸಿ ನೂತನ ಸಮಿತಿಯನ್ನು ರಚಿಸಲಾಗುವದು ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸುಮಾರು 1.75 ಲಕ್ಷ ತುಳು ಭಾಷಿಕರಿದ್ದು, ಸುಮಾರು 8 ಪಂಗಡಗಳಿವೆ. ಪ್ರತಿಯೊಂದು ಪಂಗಡದವರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಈ ಕೂಟವನ್ನು ರಚಿಸಲಾಗಿದೆ. ಎಲ್ಲಾ ಪಂಗಡಗಳಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿದ್ದಾರೆ. ತುಳು ಭಾಷಿಕರ ಸಂಸ್ಕøತಿಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಸಂಘಟನೆಗೆ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತುಳು ಭಾಷಿಕರಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿ ದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.
ತುಳು ಭಾಷಿಕರ ಬೆಳವಣಿಗೆಗೆ ಕರ್ನಾಟಕ ತುಳು ಅಕಾಡೆಮಿ ಅಸ್ತಿತ್ವದಲ್ಲಿದ್ದರೂ ಅದು ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ತುಳುವೆರ ಜನಪದ ಕೂಟಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ. ಲೀಲಾರಾಮ್, ಆದಿ ದ್ರಾವಿಡ ಜನಾಂಗದ ಅಧ್ಯಕ್ಷ ಎಂ.ಪಿ. ಓಂಕಾರಪ್ಪ, ನಾಯಕ ಜನಾಂಗದ ಜಯಪ್ರಕಾಶ್, ಬಿಲ್ಲವ ಜನಾಂಗದ ಕೃಷ್ಣಪ್ಪ, ಮೊಗೇರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ದಾಮೋಧರ್ ಹಾಗೂ ಕುಲಾಲ್ ಸಮಾಜದ ಕೆ.ಪಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.