ಸೋಮವಾರಪೇಟೆ,ಅ.19: ಇಲ್ಲಿನ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಚಳಿ ಬಿಡಿಸಿದರು.ವೇದಿಕೆಯ ತಾಲೂಕು ಘಟಕದ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಚೇರಿಗಳಿಗೆ ಭೇಟಿ ನೀಡಿದ ರವಿಕೃಷ್ಣಾ ರೆಡ್ಡಿ ಅವರು, ಕಚೇರಿಯಲ್ಲಿ ಕಾದು ಕುಳಿತಿದ್ದ ಸಾರ್ವಜನಿಕರ ಅಹವಾಲು ಆಲಿಸಿದರು.

ತಮ್ಮ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿದೆ. ಇಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೈಬಿಸಿ ಮಾಡದ ಹೊರತು ಯಾವದೇ ಕೆಲಸಗಳು ಆಗುವದಿಲ್ಲ. ತಾಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಗಳ ಸುರಿಮಳೆ ಗೈದರು.

(ಮೊದಲ ಪುಟದಿಂದ) ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಲು ಕಚೇರಿಯೊಳಗೆ ತೆರಳಿದ ಸಂದರ್ಭ ಯಾವೊಬ್ಬ ಅಧಿಕಾರಿಯ ಮೇಜಿನ ಮೇಲೂ ಹೆಸರು ಮತ್ತು ಹುದ್ದೆ ನಮೂದಿಸದೇ ಇರುವದನ್ನು ಕಂಡು, ಶಿರಸ್ತೇದಾರ್ ಕೆ.ಎಂ. ಚಿಣ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗೆ ಕಚೇರಿಗೆ ಆಗಮಿಸಿ ಯಾವ ಅಧಿಕಾರಿಯ ಬಳಿ ತೆರಳಬೇಕೆಂದು ತೋಚದೇ ಗೊಂದಲ ಅನುಭವಿಸುತ್ತಿದ್ದಾರೆ. ನಿಮ್ಮ ಹೆಸರು ಮತ್ತು ಹುದ್ದೆಯ ಬಗ್ಗೆ ಫಲಕ ಅಳವಡಿಸಲೂ ಸಹ ಹಣವಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಅನಿರೀಕ್ಷಿತ ಪ್ರಶ್ನೆಯಿಂದ ತಬ್ಬಿಬ್ಬಾದ ಅಧಿಕಾರಿಗಳು ಕ್ಷಣಕಾಲ ದಂಗಾದರು. ನಿಮ್ಮ ಬಳಿ ಹಣವಿಲ್ಲದಿದ್ದರೆ ನಾವುಗಳೇ ಚಂದಾ ಎತ್ತಿ ನಿಮಗೆ ‘ನೇಮ್‍ಪ್ಲೇಟ್’ ನೀಡುತ್ತೇವೆ ಎಂದು ಹೇಳಿದರು. ತಕ್ಷಣ ತಾವು 10 ರೂಪಾಯಿ ತೆಗೆದು ಟೇಬಲ್ ಮೇಲಿಟ್ಟು, ಎಲ್ಲರೂ ತಲಾ ಐದೈದು ರೂಪಾಯಿ ನೀಡುವಂತೆ ವೇದಿಕೆಯ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು. ಎಲ್ಲರೂ ಮೇಜಿನ ಮೇಲೆ ಹಣ ಹಾಕುತ್ತಿದ್ದಂತೆ ಶಿರಸ್ತೇದಾರ್ ಚಿಣ್ಣಪ್ಪ ಗಲಿಬಿಲಿಗೊಂಡು ‘ಬೇಡ ಸಾರ್ ನಾವೇ ಫಲಕ ಹಾಕಿಸ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಕ್ಷಣ ಕಂಪ್ಯೂಟರ್ ಆಪರೇಟರ್‍ಗೆ ಸೂಚನೆ ನೀಡಿ ನಾಮಫಲಕವನ್ನು ಅಳವಡಿಸಿಕೊಂಡರು. ದೊಡ್ಡಹಣಕೋಡು ಗ್ರಾಮದ ಕಾಳಿಂಗ ಎಂಬವರು ಒಂದು ವರ್ಷದಿಂದ ಕಚೇರಿಗೆ ಅಲೆದರೂ ಇಂದಿಗೂ ಕೆಲಸವಾಗದ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇವರೊಂದಿಗೆ ಹಲವು ಮಂದಿ ಸಾರ್ವಜನಿಕರೂ ಸೇರಿ ತಾಲೂಕು ಕಚೇರಿಯ ಅವ್ಯವಸ್ಥೆ ಬಗ್ಗೆ ದೂರುಗಳ ಸುರಿಮಳೆಗೈದರು.

ನಂತರ ತಹಶೀಲ್ದಾರ್ ಕಚೇರಿಗೆ ತೆರಳಿದ ವೇದಿಕೆಯ ಪದಾಧಿಕಾರಿಗಳು, ತಹಶೀಲ್ದಾರ್ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ, ತಾಲೂಕು ಕಚೇರಿಯನ್ನು ಭ್ರಷ್ಟಾಚಾರ ಹಾಗೂ ಲಂಚಮುಕ್ತವನ್ನಾಗಿ ಮಾರ್ಪಡಿಸಬೇಕು. ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಕಾರ್ಯಗಳು ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ತಾವುಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರ ಉಪಯೋಗಕ್ಕೆ ಶೌಚಾಲಯವೇ ಇಲ್ಲ. ದುರಸ್ತಿಯ ನೆಪದಲ್ಲಿ ಶೌಚಾಲಯಕ್ಕೆ ಬೀಗ ಜಡಿದಿದ್ದು ಇಂದಿಗೂ ತೆರವುಗೊಳಿಸಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಎದುರಾಗಿದೆ ಎಂದು ಕೆಲವರು ದೂರಿದರು. ತಕ್ಷಣ ಶೌಚಾಲಯವನ್ನು

ಸರಿಪಡಿಸಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಕಚೇರಿ ಸಿಬ್ಬಂದಿಗಳ ಉಪಯೋಗಕ್ಕೆ ಇರುವ ಶೌಚಾಲಯಕ್ಕೆ ನಾವುಗಳು ಬೀಗ ಜಡಿಯಬೇಕಾಗುತ್ತದೆ ಎಂದು ವೇದಿಕೆಯ ಪದಾಧಿಕಾರಿಗಳು ಎಚ್ಚರಿಸಿದರು.

ಇದೇ ಸಂದರ್ಭ ಕಂದಾಯ ಇಲಾಖೆಯಲ್ಲಿ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿರುವದಾಗಿ ಹೆಬ್ಬಾಲೆ ಗ್ರಾಮದ ರಾಮಯ್ಯ ಎಂಬವರು ವೇದಿಕೆಗೆ ದೂರು ನೀಡಿದರು. ತಮ್ಮ ಜಮೀನಿನ ಸರ್ವೆ ಮಾಡಲು ಇಲಾಖೆಯ ಪ್ರಮೋದ್ ಅವರು 1500 ರೂಪಾಯಿಯನ್ನು ಈಗಾಗಲೇ ಪಡೆದಿದ್ದು, ಇನ್ನೂ 8 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವೇದಿಕೆಯ ಸಮಕ್ಷಮ ತಹಶೀಲ್ದಾರ್‍ಗೆ ದೂರು ನೀಡಿದರು. ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ರವಿಕೃಷ್ಣಾ ರೆಡ್ಡಿ ಆಗ್ರಹಿಸಿದರು.

ಈ ಸಂದರ್ಭ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪದಾಧಿಕಾರಿಗಳಾದ ಉದಯಸಿಂಹ, ವೆಂಕಟೇಶ್ ಪ್ರಸಾದ್, ತಾಲೂಕು ಘಟಕದ ಚಂದನ ಸುಬ್ರಮಣಿ, ಅಭಿಷೇಕ್, ಮಾನಸ, ವಸಂತ್, ಹರೀಶ್, ವಿಶ್ವ, ಪ್ರದಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.