ಸೋಮವಾರಪೇಟೆ, ಡಿ. 3: ಹಿಂಗಾರು ಮಳೆ ಬೀಳದ ಪರಿಣಾಮ ತಾಲೂಕಿನಲ್ಲಿ ಭತ್ತ ಫಸಲು ಶೇ. 50 ರಷ್ಟು ಹಾನಿಗೊಳಗಾಗಿದ್ದು, ಭತ್ತ ಕೃಷಿಕರು ಪರಿಹಾರಕ್ಕಾಗಿ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸೋಮವಾರಪೇಟೆ ಕೃಷಿ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಹೇಳಿದರು.

ಕೃಷಿ ಇಲಾಖೆಯಲ್ಲಿ ನಡೆದ ತಾಲೂಕು ಕೃಷಿಕರ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 9740 ಹೆಕ್ಟರ್ ಭೂಮಿಯಲ್ಲಿ ಭತ್ತ ಕೃಷಿ ಮಾಡಿದ್ದು, ಅದರಲ್ಲಿ 4500 ಹೆಕ್ಟೆರ್‍ನಲ್ಲಿ ಬೆಳೆಹಾನಿಯಾಗಿದೆ ಎಂದರು. ಶೇ. 33 ರಷ್ಟು ಫಸಲು ನಷ್ಟವಾದರೆ ಮಾತ್ರ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಆರ್‍ಟಿಸಿ, ಆಧಾರ್ ಕಾರ್ಡ್, ಫೋಟೊ, ಮೊಬೈಲ್ ನಂಬರ್ ಅನ್ನು ನಮೂದಿಸಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿಬೇಕು. ನಂತರ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಪರೀಶಿಲನೆ ನಡೆಸಿ, ಪರಿಹಾರಕ್ಕೆ ಶಿಫಾರಸ್ಸು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಮಣ್ಣು ಅರೋಗ್ಯ ಅಭಿಯಾನ ಪ್ರಾರಂಭಿಸಲಾಗಿದ್ದು, ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗುವದು. ತಾ. 5 ರಂದು ಕೃಷಿ ಇಲಾಖೆಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಆಚರಿಸಲಾಗುವದು ಎಂದು ಮಾಹಿತಿ ನೀಡಿದರು. ಮಿನಿ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ಸ್ಪ್ರೇಯರ್ಸ್, ಕಳೆ ಕೊಚ್ಚುವ ಯಂತ್ರಗಳನ್ನು ಸಹಾಯ ಧನದಲ್ಲಿ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದರು.

ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಮಾಹಿತಿ ನೀಡಿ, ತಾಲೂಕಿನಲ್ಲಿ 15 ಸಾವಿರ ಮೆಟ್ರಿಕ್ ಟನ್ ಅರೇಬಿಕಾ ಮತ್ತು 5 ಸಾವಿರ ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಉತ್ಪಾದನೆ ಗುರಿ ಹೊಂದಲಾಗಿದೆ. ಹಿಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕಾಫಿ ಇಳುವರಿ ಕಡಿಮೆಯಾಗುವ ಸಂಭವವಿದೆ. ಕಾಫಿ ಮಂಡಳಿಯಿಂದ ಬೆಳೆಹಾನಿ ಪರಿಹಾರಕ್ಕೆ ಯಾವದೇ ಅನುದಾನವಿಲ್ಲ ಎಂದು ಹೇಳಿದರು. ಕಾಫಿ ಪಲ್ಪಿಂಗ್ ಘಟಕ, ಕೆರೆ, ಕೊಳವೆ ಬಾವಿ, ಯಂತ್ರಗಳ ಖರೀದಿ, ಹೊಸದಾಗಿ ಕಾಫಿ ತೋಟ ಮಾಡಲು ಸಹಾಯಧನ ನೀಡುವ ಯೋಜನೆಯಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕರ ಸಮಾಜದ ತಾಲೂಕು ಅಧ್ಯಕ್ಷ ತಾಕೇರಿ ಪೊನ್ನಪ್ಪ ಮಾತನಾಡಿ, ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿರುವದರಿಂದ, ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಲುಪಿಸಬೇಕು ಎಂದು ಹೇಳಿದರು. ಕೆಲ ಇಲಾಖೆಯ ಅಧಿಕಾರಿಗಳಿಗೆ ಕೃಷಿಕರು ಎಂದರೆ ಅಸಡ್ಡೆಯಿದೆ. ಕೃಷಿಕರ ಸಮಾಜದ ಸಭೆಗೆ ಆಗಾಗ್ಗೆ ಗೈರಾರುವ ಮೂಲಕ ತಮ್ಮ ಅಸಡ್ಡೆ ತೋರ್ಪಡಿಸುತ್ತಿದ್ದಾರೆ. ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಚಿಟ್ಟಿಯಪ್ಪ, ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜು, ಕೃಷಿ ಅಧಿಕಾರಿ ಮುಕುಂದ ಅವರುಗಳು ಉಪಸ್ಥಿತರಿದ್ದರು.