ಕೂಡಿಗೆ, ನ. 9: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ್ದಾರೆ.ಸೋಮವಾರಪೇಟೆ ತಾಲೂಕು ವಿಭಾಗಕ್ಕೆ ಮಳೆ ಹೆಚ್ಚು ಬಿದ್ದಿದೆ ಎಂಬ ತಪ್ಪು ಮಾಹಿತಿಯಿಂದ ಸೋಮವಾರಪೇಟೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ. ಹಾರಂಗಿ ಅಣೆಕಟ್ಟೆಯಿಂದ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ನೀರು ಹರಿಸಿದರೂ ಪ್ರಯೋಜನವಾಗದೆ 10 ದಿನಗಳಿಗೊಮ್ಮೆ ನಾಲೆಗಳಿಗೆ ನೀರು ಹರಿಸಿದ ಪರಿಣಾಮ ಈ ವ್ಯಾಪ್ತಿಯಲ್ಲಿ ಬೆಳೆಯಾಗಿರುವ ಕಡಿಮೆ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೇಸಾಯ ಮಾಡಿರುವ ಭತ್ತದ ಬೆಳೆಗೆ ಸಮರ್ಪಕವಾಗಿ ನೀರು ಒದಗಿಸದೆ ಬೆಳೆಗಳು ಒಣಗುತ್ತಿವೆ.
ತಾಲೂಕಿನಲ್ಲಿ ಕಾಫಿ ಮತ್ತು ಇತರೆ ಬೆಳೆಗಳು ಸಮರ್ಪಕವಾಗಿ ಬಾರದೆ ಇರುವ ಹಿನ್ನೆಲೆಯಲ್ಲಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಹಾಗೂ ಕುಶಾಲನಗರ ಹೋಬಳಿ ವ್ಯಾಪ್ತಿಯ ಸಹಕಾರ ಸಂಘಗಳ ಅಧ್ಯಕ್ಷರುಗಳಾದ ಕೆ.ಕೆ. ಹೇಮಂತ್ ಕುಮಾರ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸೇರಿದಂತೆ ನಿರ್ದೇಶಕರು ಸಭೆಯಲ್ಲಿ ಆಗ್ರಹಿಸಿದ್ದಾರೆ.
ಎಸ್.ಎನ್. ರಾಜಾರಾವ್ ಮಾತನಾಡಿ, ಜಿಲ್ಲೆಯ ಎರಡು ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವದು ಸ್ವಾಗತಾರ್ಹ. ಆದರೆ ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ಸಹ ಅಧಿಕಾರಿಗಳ ಅವೈಜ್ಞಾನಿಕ ಮಾಹಿತಿಯಿಂದಾಗಿ ಈ ಭಾಗಕ್ಕೆ ಹೆಚ್ಚು ಮಳೆ ಬಿದ್ದಿದೆ ಎಂದು ನೀಡಿರುವ ವರದಿಯು ಅರ್ಥಪೂರ್ಣವಾಗಿರುವದಿಲ್ಲ. ಆದರೆ ಈ ತಾಲೂಕಿನಲ್ಲಿ ಕಾಫಿ, ಏಲಕ್ಕಿ, ಭತ್ತ, ಜೋಳದ ಬೆಳೆಗಳು ಸಮರ್ಪಕವಾಗಿ ಬಾರದೆ ರೈತರು ಆತಂಕಕ್ಕೊಳಗಾಗಿದ್ದಾರೆ ಎಂದರು.
ತಾಲೂಕಿನ ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕ್ಷೇತ್ರವಾರು ಸಂಚರಿಸಿ ಸಮರ್ಪಕ ಮಾಹಿತಿಯನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ನೀಡಬೇಕೆಂದು ಆಗ್ರಹಿಸಿದರು.
ಸೋಮವಾರಪೇಟೆ ತಾಲೂಕಿನ ಎಲ್ಲಾ ರೈತರು ಸಹಕಾರ ಸಂಘಗಳಿಂದ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟ ಎದುರಾಗಿದೆ. ರೈತರ ಸಾಲ ಮನ್ನಾ ಮಾಡುವದರ ಜೊತೆಗೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
- ಕೆ.ಕೆ. ನಾಗರಾಜ ಶೆಟ್ಟಿ.