ಮಡಿಕೇರಿ ಸೆ. 8: ತಲಕಾವೇರಿಯ ಮೂಲ ಸ್ಥಳವಾದ ಕುಂಡಿಕೆಯ ಮೇಲ್ಭಾಗ ಯಾವದೇ ಮೇಲ್ಛಾವಣಿ ಅಗತ್ಯವಿಲ್ಲ. ಪವಿತ್ರ ಕುಂಡಿಕೆ ಪೂರ್ಣ ಮುಕ್ತ ವಾತಾವರಣದಲ್ಲಿರಲಿ ಎಂಬದಾಗಿ ಮಡಿಕೇರಿ ಕೊಡವ ಸಮಾಜದ ತತ್ಪೂರ್ವ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಅವರು”ಶಕ್ತಿ”ಗೆ ನೀಡಿರುವ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮನು ಮುತ್ತಪ್ಪ ಅವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದಾಗ ಕ್ಷೇತ್ರದಲ್ಲಿ ಸ್ವರ್ಣ ಪ್ರಶ್ನೆ ಏರ್ಪಡಿಸಲಾಗಿತ್ತು. ಆಗ ಕ್ಷೇತ್ರ ತಂತ್ರಿಗಳ ಸಮ್ಮುಖದಲ್ಲಿ ಜ್ಯೋತಿಶ್ಶಾಸ್ತ್ರಜ್ಞರು ಸ್ಪಷ್ಟವಾಗಿ ಹೀಗೆ ನುಡಿದಿದ್ದರು:-ಪವಿತ್ರ ಕಾವೇರಿ ಕುಂಡಿಕೆ ಮೇಲ್ಗಡೆ ಯಾವದೇ ಮೇಲ್ಛಾವಣಿಯಿರಬಾರದು. ಸೂರ್ಯ ರಶ್ಮಿ ನೇರವಾಗಿ ಮೂಲ ಕುಂಡಿಕೆಗೆ ಬೀಳಬೇಕು ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ಮುಂದುವರಿದು ಕಾವೇರಿ ಕುಂಡಿಕೆಗೆ ಯಾವದೇ ಪೂಜಾದಿಗಳ ಅಗತ್ಯವಿಲ್ಲ. ಆ ಸ್ಥಳದಲ್ಲಿ ಅರ್ಚಕರು ಕೇವಲ ಭಕ್ತಾದಿಗಳಿಗೆ ಕಾವೇರಿ ತೀರ್ಥವನ್ನು ಪ್ರೋಕ್ಷಿಸಬೇಕೇ ಹೊರತು ಬೇರೆ ಯಾವದೇ ಪೂಜಾ ವಿಧಿ ವಿಧಾನಗಳನ್ನು ಕೂಡ ನಡೆಸಬಾರದು ಎನ್ನುವ ಸ್ಪಷ್ಟ ಸೂಚನೆಯನ್ನು ಪ್ರಶ್ನೆ ಸಂದರ್ಭ ನೀಡಿದ್ದರು ಎಂದು ಶಂಭು ಸುಬ್ಬಯ್ಯ ವಿವರಿಸಿದ್ದಾರೆ.