ಮಡಿಕೇರಿ, ಜ. 7: ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ ಹಾಗೂ ತಾಲೂಕು ಯುವ ಒಕ್ಕೂಟ, ಮಡಿಕೇರಿ ಎಫ್.ಎಂ.ಕೆ.ಎಂ.ಸಿ. ಇವರ ಸಂಯುಕ್ತ ಆಶ್ರಯದಲ್ಲಿ ‘ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ’ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಗರದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಐ.ಸಿ.ಎಂ. ಸಂಸ್ಥೆಯ ಪ್ರಾಂಶುಪಾಲೆ ರೇಣುಕಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದಿಂದ ಪಡೆದುಕೊಂಡ ಉಪಯೋಗವನ್ನು ಶಿಬಿರಾರ್ಥಿಗಳು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು ಎಂದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯಗಳನ್ನು ಯುವಜನರು ಅರಿತು ಮುನ್ನಡೆಯಬೇಕು. ಯುವಜನರೇ ದೇಶದ ರುವಾರಿಗಳಾಗಿದ್ದಾರೆ. ಅದರಂತೆ ಸರ್ಕಾರ ಯುವ ಜನಾಂಗಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಉಪಯೋಗ ಯುವ ಜನಾಂಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಿ.ಸಿ. ಮಂಜುನಾಥ್, ನಗರಸಭೆ ಸದಸ್ಯೆ ಅನಿತಾ ಪೂವಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸಮಾರಂಭದಲ್ಲಿ ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ. ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸಲಹೆಗಾರರಾದ ರಾಣಿ ಮಾಚಯ್ಯ ಇವರುಗಳನ್ನು ಸನ್ಮಾನಿಸಲಾಯಿತು. ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷೆ ಇಂದುಮತಿ, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ಹಾಜರಿದ್ದರು, ಶಿಬಿರಾರ್ಥಿಗಳಾಗಿ ಮಡಿಕೇರಿ ತಾಲೂಕಿನ ವಿವಿಧ ಯುವಕ ಸಂಘ, ಯುವತಿ ಮಂಡಳಿ ಸದಸ್ಯರು ಭಾಗವಹಿಸಿದ್ದರು. ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಕಾರ್ಯಕರ್ತರಾದ ಗುಣಶೇಖರ್ ಹಾಗೂ ತ್ಯಾಗರಾಜ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ಪರ್ಶಿತಾ ಮೊಂತೆರೊ ಸ್ವಾಗತಿಸಿ, ಪಿ.ಎ. ರೇಖಾ ನಿರೂಪಿಸಿದರೆ, ಜಾಹ್ನವಿ ವಂದಿಸಿದರು.