ಕುಶಾಲನಗರ, ಸೆ. 7: ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಹಾಗೂ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಜಲಾಶಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು ಸರಕಾರದ ಆದೇಶದಂತೆ ಮಂಗಳವಾರ ರಾತ್ರಿಯಿಂದ ಜಲಾಶಯದಿಂದ 2 ಸಾವಿರ ಕ್ಯೂಸೆಕ್ಸ್ ಪ್ರಮಾಣ ನೀರು ಹೊರಬಿಟ್ಟಿರುವ ಕ್ರಮವನ್ನು ಖಂಡಿಸಿ ಆಕ್ರೋಶÀ ವ್ಯಕ್ತಪಡಿಸುವದರೊಂದಿಗೆ ಕೂಡಲೇ ನೀರಿನ ಹರಿವನ್ನು ಸ್ಥಗಿತಗೊಳಿಸಬೇಕೆಂದು ಪಟ್ಟು ಹಿಡಿದರು.ಸೋಮವಾರಪೇಟೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನು ರೈ, ಮಧು ಕಿಬ್ಬೆಟ್ಟ, ಎಸ್.ಆರ್. ಸೋಮೇಶ್ ಮತ್ತು ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಾರಂಗಿ ಪ್ರವೇಶದ್ವಾರದ ಬಳಿ ಕಾರ್ಯಕರ್ತರು ಸ್ವಲ್ಪಕಾಲ ಧರಣಿ ನಡೆಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಕುಮಾರ್ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು ತಕ್ಷಣ ನೀರು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ನೀರು ಸ್ಥಗಿತಗೊಳಿಸದಿದ್ದಲ್ಲಿ ಈ ತಿಂಗಳ 9 ರಂದು ನೂರಾರು ರೈತರೊಂದಿಗೆ ಸೇರಿ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು. ಪ್ರತಿಭಟನಾಕಾರರು ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ಪೊಲೀಸರು ತಡೆಯುವಲ್ಲಿ ಯಶಸ್ವಿಯಾದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಟಿ. ಕುಮಾರ್ ನೇತೃತ್ವದಲ್ಲಿ ಅಣೆಕಟ್ಟೆ ಆವರಣದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 100 ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು.

ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಯುವ ಮೋರ್ಚಾ ಕಾರ್ಯದರ್ಶಿ ಶ್ರೀಕಾಂತ್, ಸಿ.ಡಿ. ನೆಹರು, ಯುವಮೋರ್ಚಾ ಸೋಮವಾರಪೇಟೆ ನಗರಾಧ್ಯಕ್ಷ ವಿ.ಸಿ.ಶರತ್, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಭಾಸ್ಕರ್ ನಾಯಕ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ಡಿ.ಕೆ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಪ್ರಮುಖರಾದ ವೈಶಾಖ್, ಎಂ.ವಿ.ನಾರಾಯಣ್, ಪ್ರವೀಣ್, ಸಿದ್ದರಾಜು ಇದ್ದರು.