ಗೋಣಿಕೊಪ್ಪಲು, ಸೆ. 7: ತಮಿಳುನಾಡಿಗೆÉ ಕಾವೇರಿ ನೀರು ಹಂಚಿಕೆ ಮಾಡಬೇಕೆಂದು ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ತಾ. 9 ರಂದು ಗೋಣಿಕೊಪ್ಪದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುವದು ಎಂದು ಜಿಲ್ಲಾ ರೈತ ಸಂಘ ತಿಳಿಸಿದೆ.ಸುಪ್ರಿಂ ತೀರ್ಪು ಆದೇಶವನ್ನು ಜಿಲ್ಲಾ ರೈತ ಸಂಘ ಖಂಡಿಸುತ್ತದೆ. ರಾಜ್ಯ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ ಆರೋಪಿಸಿದರು.ರಾಜ್ಯ ಸರ್ಕಾರ ರೈತರಿಗೆ ಬೇಕಾದ ನೀರಿನ ಶೇಖರಣೆಯ ನೈಜ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮಂಡಿಸಲು ವಿಫಲವಾಗಿದೆ. ಪರಿಣಾಮ ಭವಿಷ್ಯದಲ್ಲಿ ರಾಜ್ಯ ಬರಡುಭೂಮಿ ಪ್ರದೇಶವನ್ನು ನೋಡುವ ಸ್ಥಿತಿ ಎದುರಾಗಲಿದೆ. ಜಿಲ್ಲೆಯ ಮೂಲಕ ಪ್ರಕೃತಿಗೆ ತೊಡಕಾಗುವ ಯಾವದೇ ಕಾಮಗಾರಿಗಳಿಗೆ ರೈತ ಸಂಘ ತಡೆ ಮಾಡಲಿದೆ. ಈಗಿರುವ ರಸ್ತೆಗಿಂತ ಹೆಚ್ಚಿನ ರಸ್ತೆ ನಿರ್ಮಾಣ, ರೈಲು ಮಾರ್ಗ ಯೋಜನೆಗಳು ಜಿಲ್ಲೆಗೆ ಬೇಡ ಎಂದರು.

ಆದೇಶವನ್ನು ಖಂಡಿಸಲು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗುವದು ಎಂದರು.

ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ, ಹೈಟೆನ್ಷನ್ ಕಾಮಗಾರಿ ಮೂಲಕ ಕೊಡಗಿನ ಪ್ರಕೃತಿಯನ್ನು ನಾಶಪಡಿಸಲಾಯಿತು. ಇದರಿಂದ ಪ್ರಕೃತಿ ವಿಕೋಪ ಎದುರಿಸುವಂತಾಗಿದೆ. ಅಂದಿನ ಶಾಸಕ, ಸಂಸದರು ಕೂಡ ಪರಿಸರಕ್ಕೆ ಆಗುವ ಅನಾಹುತಗಳ ಬಗ್ಗೆ ಗಮನ ಹರಿಸಲಿಲ್ಲ. ಇಂದು ಕಾವೇರಿ ನೀರು ಮತ್ತೊಂದು ರಾಜ್ಯಕ್ಕೆ ಹರಿಯುವಾಗ ರೈತರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೋರಾಟ ನಡೆಸಬೇಕಿತ್ತು. ತನ್ನ ರಕ್ಷಣೆಗಾಗಿ ರೈತರಿಗೆ ಅನ್ಯಾಯ ಮಾಡುವಂತೆ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸದಸ್ಯರುಗಳಾದ ಪುಚ್ಚಿಮಾಡ ಸಂತೋಷ್, ಸತ್ಯ, ಮಚ್ಚಮಾಡ ರಂಜಿ ಉಪಸ್ಥಿತರಿದ್ದರು.