ಮಡಿಕೇರಿ, ಡಿ. 17: ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು ಪತ್ತೆ ಹಚ್ಚಿ ಮರ ವಶಪಡಿಸಿಕೊಂಡಿದ್ದಾರೆ.ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾನೂರು ಗ್ರಾಮದ ಕಾಫಿ ತೋಟದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ನಿವಾಸಿ ಕೆ. ಮನು ಮೇದಪ್ಪ ಅವರ ತೋಟದಲ್ಲಿ ಮರ ಕಡಿದು ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿದೆ.2 ಬೀಟಿ ಹಾಗೂ 10 ಹೊನ್ನೆಮರವನ್ನು ಒಟ್ಟು 100 ಲಾಗ್‍ಗಳಾಗಿ ಪರಿವರ್ತಿಸಿ ಸಾಗಾಟಕ್ಕೆ ಸಿದ್ಧಪಡಿಸಲಾಗಿತ್ತು. ಪ್ರಬಾರ ಎಸ್.ಪಿ. ಮುತ್ತುರಾಜ್ ಮಾರ್ಗದರ್ಶನದಲ್ಲಿ ಡಿ.ಸಿ.ಐ.ಬಿ. ಇನ್ಸ್‍ಪೆಕ್ಟರ್ ಕರೀಂ ರಾವ್‍ತರ್ ಹಾಗೂ ಸಿಬ್ಬಂದಿ ಇದನ್ನು ಬಯಲಿಗೆಳೆದಿದ್ದು, ತೋಟದ ಮಾಲೀಕ ಮನು ಮೇದಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಆರೋಪಿತರ ವಿರುದ್ಧ ಡಿ.ಸಿ.ಐ.ಬಿ. ತನಿಖೆ ನಡೆಸುತ್ತಿದೆ.

ವಶಪಡಿಸಿಕೊಂಡ ಮರದ ಮೌಲ್ಯ ರೂ. 25 ಲಕ್ಷ ಎಂದು ಅಂದಾಜಿಸಲಾಗಿದೆ. ಕಾರ್ಯಾ ಚರಣೆಯಲ್ಲಿ ಎ.ಎಸ್.ಐ. ಹಮೀದ್, ಸಿಬ್ಬಂದಿಗಳಾದ ಅನಿಲ್, ವೆಂಕಟೇಶ್, ತಮ್ಮಯ್ಯ, ಯೋಗೇಶ್, ನಿರಂಜನ್, ವಸಂತ, ಶಶಿಕುಮಾರ್ ಪಾಲ್ಗೊಂಡಿದ್ದರು.