ಮಡಿಕೇರಿ, ಆ. 11: ಮೂವರು ವಾಹನ ಚೋರರನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದ್ದು, ನಗದು ಸೇರಿ 33,15,000 ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತಃ ಕಾಸರಗೋಡಿನ ಅಣಂಗೂರಿನವನಾಗಿದ್ದು, ಪ್ರಸ್ತುತ ಶಿರಂಗಾಲದ ತೊರೆನೂರು ಮುಖ್ಯರಸ್ತೆಯ ಎನ್.ಎಸ್.ಆರ್. ಕೇರಳ ಹೊಟೇಲ್ನಲ್ಲಿ ವಾಸವಿದ್ದ ಮೊಹಮ್ಮದ್ ಸಲೀಂ, ಕೇರಳದ ಪತ್ತಣಂತಿಟ್ಟ ಜಿಲ್ಲೆಯ ಅಡೂರು ತಾಲೂಕಿನ ಕೆನಾದಿಮಂಗಲ್ ಗ್ರಾಮದ ಸಾಜು ವರ್ಗೀಸ್, ಕೇರಳ ಮಲ್ಲಪುರಂ ಜಿಲ್ಲೆಯ ವೆಲಂಬೂರು ತಾಲೂಕಿನ ಪೊತ್ಕಲ್ ಗ್ರಾಮದ ಮಹಮ್ಮದ್ ಸಾಫಿ ಇವರುಗಳೇ ಬಂಧಿತ ಆರೋಪಿಗಳು.
ತಾ. 10ರಂದು ಡಿಸಿಐಬಿ ನಿರೀಕ್ಷಕರು ಹಾಗೂ ಸಿಬ್ಬಂದಿ ರಾತ್ರಿ 11 ಗಂಟೆಗೆ ಕರ್ತವ್ಯದ ಹಿನ್ನೆಲೆ ಮಡಿಕೇರಿ- ಕುಶಾಲನಗರ ರಸ್ತೆಯಲ್ಲಿ ಇಲಾಖಾ ಜೀಪ್ನಲ್ಲಿ ತೆರಳುತ್ತಿದ್ದಾಗ, ಮಡಿಕೇರಿ ನಗರದ ಚೈನ್ಗೇಟ್ ಬಸ್ ಶೆಲ್ಟರ್ ಬಳಿ ರಸ್ತೆಬದಿಯಲ್ಲಿ ಒಂದು ಕಪ್ಪುಬಣ್ಣದ ಕ್ವಾಲೀಸ್ ವಾಹನ ನಿಂತಿದ್ದನ್ನು ಕಂಡು ವಾಹನದ ಬಳಿ ಹೋಗಿ ವಾಹನದೊಳಗಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ ಯಾವದೇ ಸಮರ್ಪಕ ಉತ್ತರ ನೀಡದೇ ಇದ್ದುದರಿಂದ ವಾಹನದೊಳಗೆ ಪರಿಶೀಲಿಸಲಾಯಿತು. ಈ ಸಂದರ್ಭ ಹಿಂಬದಿ ಸೀಟಿನಲ್ಲಿ ಇದ್ದ ಒಂದು ಪ್ಲಾಸ್ಟಿಕ್ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರೊಳಗೆ ಎರಡು ಸ್ಕ್ರೂಡ್ರೈವರ್, ಒಂದು ಚಾಕು, ಒಂದು ಮೊನಚಾದ ಉಳಿ, ಎರಡು ಕಟ್ಟಿಂಗ್ ಪ್ಲೈಯರ್ ಮತ್ತು ಎರಡು ಸ್ಪ್ಯಾನರ್ ಇದ್ದ ಹಿನ್ನೆಲೆ ಸಂಶಯದಿಂದ ವಾಹನದ ದಾಖಲಾತಿಗಳನ್ನು ಕೇಳಿದಾಗ ದಾಖಲಾತಿಗಳಿಲ್ಲವೆಂದು ತಿಳಿದುಬಂದ ಹಿನ್ನೆಲೆ ಮೂರು ಜನರನ್ನು ವಾಹನದೊಂದಿಗೆ ವಶಕ್ಕೆ ಪಡೆದು ಡಿಸಿಐಬಿ ನಿರೀಕ್ಷಕರ ಕಚೇರಿಗೆ ಕರೆತಂದು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ನಿಜಬಣ್ಣ ಬಯಲಾಯಿತು ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಹನಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿರುವದಾಗಿ ತಿಳಿಸಿದ ಆರೋಪಿಗಳು
(ಮೊದಲ ಪುಟದಿಂದ) ಈ ಹಿಂದೆ ಕೇರಳ ಕ್ಯಾಲಿಕಟ್ ಬಡಗರನಿಂದ ಎರಡು ಟಿಪ್ಪರ್ ವಾಹನಗಳನ್ನು ಮತ್ತು ಕುಶಾಲನಗರದಿಂದ ಒಂದು ಕ್ವಾಲಿಸ್ ವಾಹನವನ್ನು ಕಳವು ಮಾಡಿದ್ದುದಾಗಿ ಒಪ್ಪಿಕೊಂಡ ಹಿನ್ನೆಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ವಾಲಿಸ್ ಕಳ್ಳತನ ಪ್ರಕರಣಕ್ಕೂ ಆರೋಪಿಗಳು ತಿಳಿಸಿದ ಕ್ವಾಲಿಸ್ ವಾಹನ ಕಳ್ಳತನ ಪ್ರಕರಣಕ್ಕೆ ಹೋಲಿಕೆಯಾದ ಹಿನ್ನೆಲೆ ಡಿಸಿಐಬಿ ನಿರೀಕ್ಷಕರು ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸಿದಾಗ ಒಂದೊಂದೇ ಸತ್ಯಾಂಶ ಹೊರಬಂದಿದೆ. ಆರೋಪಿಗಳು ಕುಶಾಲನಗರದಿಂದ ಕಳವು ಮಾಡಿದ (ಕೆಎ-09 ಎನ್-1723) ಕ್ವಾಲಿಸ್ ವಾಹನವನ್ನು ಕೇರಳ ರಾಜ್ಯದ ಕಾಸರಗೋಡಿನಲ್ಲಿ, ಕೇರಳ ಕ್ಯಾಲಿಕಟ್ ಬಡಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿದ (ಕೆಎಲ್ 08 ಡಬ್ಲ್ಯು-1861)ರ ಮಹೀಂದ್ರಾ ಟಿಪ್ಪರ್ ವಾಹನ ಕೇರಳ ರಾಜ್ಯದ ಕಾಸರಗೋಡಿನಲ್ಲಿ, ಕೇರಳ ಕ್ಯಾಲಿಕಟ್ನ ಎಲತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿದ (ಕೆಎಲ್ 18 ಬಿ-8469) ನೋಂದಣಿ ಸಂಖ್ಯೆಯ ಈಚರ್ ಟಿಪ್ಪರ್ ವಾಹನವನ್ನು ಕುಶಾಲನಗರದಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಆರೋಪಿಗಳು ಅವರುಗಳ ಸ್ನೇಹಿತರೆಂದು ಹೇಳಿಕೊಂಡು ಪಡೆದು ಕೃತ್ಯಕ್ಕೆ ಬದಲಾಯಿಸಿಕೊಂಡು ಬಳಸುತ್ತಿದ್ದ (ಡಿಎಲ್ಐಸಿಎಮ್ 2307) ಕ್ವಾಲಿಸ್ ವಾಹನ, ರಾಯಲ್ ಎನ್ಫೀಲ್ಡ್ ಬುಲೆಟ್ (ಟಿಎನ್ 09 ಬಿಬಿ 0519), ಆಟೋ ರಿಕ್ಷಾ (ಕೆಎಲ್ 13 -5209), ಪಲ್ಸರ್ ಮೋಟಾರ್ ಸೈಕಲ್ (ಕೆಎಲ್ 11 ಎಆರ್ 2948), ಇಂಡಿಕಾ ಕಾರ್ (ಕೆಎಲ್ 14 ಕ್ಯು 2631), ಆಲ್ಟೋ ಕಾರ್ (ಕೆಎಲ್ 14 ಹೆಚ್ 3799), ಮಾರುತಿ 800 ಕಾರು (ಕೆಎ 02 ಎಂಸಿ 2) ವಾಹನಗಳನ್ನು ಮತ್ತು ನಗದು ರೂ. 20000ಗಳನ್ನು ವಶಪಡಿಸಿಕೊಂಡು ತನಿಖೆ ನಡೆಯುತ್ತಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಸಲೀಂ 1990ನೇ ಸಾಲಿನಿಂದ ಕೇರಳದ ಕಾಸರಗೋಡು, ಕಾಂಞಂಗಾಡ್ ಕುಂಬಳೆ ಹಾಗೂ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆ, ಹೊಳೆನರಸೀಪುರ, ಕೊಡಗು ಜಿಲ್ಲೆಯ ವೀರಾಜಪೇಟೆ ಮತ್ತು ಮಹಾರಾಷ್ಟ್ರದ ಮುಂಬೈ ನಗರ ಠಾಣಾ ವ್ಯಾಪ್ತಿಗಳ ವಾಹನ ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿ ರುವದಾಗಿ ತಿಳಿದುಬಂದಿದೆ. ಮತ್ತೋರ್ವ ಆರೋಪಿ ಸಾಜು ವರ್ಗೀಸ್ ಕೇರಳ ರಾಜ್ಯದ ಕಣ್ಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಕಳ್ಳತನ ಪ್ರಕರಣ ಹಾಗೂ ಇರಿಟಿಯಲ್ಲಿ ಅಕ್ರಮ ಮದ್ಯಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವದಾಗಿ, ಮಹಮ್ಮದ್ ಸಾಫಿ ಕೇರಳ ಮಲಪುರಂ ಜಿಲ್ಲೆಯ ಪೋತ್ಗಲ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಟದಲ್ಲೂ ಭಾಗಿಯಾಗಿರುವದು ಧೃಢಪಟ್ಟಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಸಿಬ್ಬಂದಿಗಳಾದ ಎಎಸ್ಐ ಹಮೀದ್, ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಸಜಿ, ಯು.ಎ. ಮಹೇಶ್, ಎಂ.ಬಿ. ಸುಮತಿ ಸುಬ್ಬಯ್ಯ, ಸುಮೇಶ್, ಮಧುಸೂದನ್, ರಾಜೇಶ್ ಮತ್ತು ಗಿರೀಶ್ ಭಾಗವಹಿಸಿದ್ದರು.