ಸುಂಟಿಕೊಪ್ಪ, ಜ. 24: ವಿದ್ಯಾರ್ಥಿಗಳೇ ಭಾರತದ ಆಸ್ತಿಯಾಗಿದ್ದು ಉತ್ತಮ ವಿದ್ಯೆ ಪಡೆದು ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ನಗದು ರಹಿತ ಡಿಜಿಟಲ್ ವ್ಯವಹಾರದ ಮಾಹಿತಿ ಪಡೆಯುವ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಬಾರ್ಡ್ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಸಹಯೋಗದಲ್ಲಿ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ನಗದು ರಹಿತ ಡಿಜಿಟಲ್ ಆರ್ಥಿಕ ಸಾಕ್ಷರತಾ ಜನ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗಿಡ ಬೆಳೆದಂತೆ ಮರವಾಗಿ ಅದು ಜನರಿಗೆ ನೆರಳು ನೀಡುವ ಮೂಲಕ ಪರಿಸರ ಸಂರಕ್ಷಿಸುತ್ತದೆ. ಅದೇ ರೀತಿ ಪುಟಾಣಿ ಮಕ್ಕಳು ಉತ್ತಮ ವಿದ್ಯೆ ಪಡೆದು ಸತ್ಪ್ರಜೆಗಳಾಗಿ ದೇಶಕ್ಕೆ ಅಳಿಲು ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ ತುಂಗಾರಾಜ್ ಮಾತನಾಡಿ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರೇ ದೇಶದ ಬೆನ್ನೆಲುಬು ಗ್ರಾಮೀಣ ಪ್ರದೇಶದ ರೈತರು, ಮಧ್ಯಮ ವರ್ಗದವರು ಕಾರ್ಮಿಕರ ಶ್ರಮ ದೇಶದ ಉನ್ನತಿಗೆ ಕಾರಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ ಯಶಸ್ವಿಗೊಳಿಸಬೇಕಾದರೆ ಎಲ್ಲರೂ ಈ ವೈಜ್ಞಾನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ನಗದು ರಹಿತ ಡಿಜಿಟಲ್ ಪಾರದರ್ಶಕವಾದರೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಾಗಭೂಷಣ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಪ್ರಧಾನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಮಾತನಾಡಿದರು.
ಸುಂಟಿಕೊಪ್ಪ ವಿಜಯ ಬ್ಯಾಂಕ್ ವ್ಯವಸ್ಥಾಪಕ ಸಂದೀಪ್, ಸೆಂಟ್ರಲ್ ಬ್ಯಾಂಕ್ ವ್ಯವಸ್ಥಾಪಕ ಆಚಾರ್ಯ, ಕೆನರಾಬ್ಯಾಂಕ್ ರವಿಕುಮಾರ್, ಡಿಸಿಸಿ ಬ್ಯಾಂಕ್ ಸಂಪನ್ಮೂಲ ಅಧಿಕಾರಿ ರಿಶಿತಾ ಆಗಮಿಸಿದ್ದು, ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು.
ಸರಕಾರಿ ಪ್ರೌಢಶಾಲೆಯ ಸಜನ ತಂಡದವರು ಪ್ರಾರ್ಥಿಸಿ, ಸರಕಾರಿ ಪ್ರೌಢಶಾಲಾ ಶಿಕ್ಷಕ ಸಿ.ಟಿ. ಸೋಮಶೇಖರ್ ಸ್ವಾಗತಿಸಿ, ಸೌಂದರ್ಯ ನಿರೂಪಿಸಿ, ಟಿ.ಜಿ. ಪ್ರೇಮ್ ಕುಮಾರ್ ವಂದಿಸಿದರು.