ಸೋಮವಾರಪೇಟೆ, ಅ. 19: ಇಲ್ಲಿನ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಸೋಮವಾರಪೇಟೆ ಯ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಪ್ರತಿಷ್ಠಿತ ಆಹ್ವಾನಿತ ತಂಡಗಳ ನಡುವೆ ಹಾಕಿ ಪಂದ್ಯಾವಳಿ ಆಯೋಜಿಸ ಲಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಅಶೋಕ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಲಂಪಿಯನ್, ಭಾರತೀಯ ಹಾಕಿ ತಂಡದ ಆಟಗಾರ, ಮೂಲತಃ ಸೋಮವಾರಪೇಟೆಯ ಎಸ್.ವಿ. ಸುನಿಲ್ ಅವರ ತಂದೆ ದಿ. ಎಸ್.ಎಂ. ವಿಠಲಾಚಾರ್ಯ ಅವರ ಸ್ಮಾರಕ ಕಪ್ ಹಾಕಿ ಪಂದ್ಯಾಟ ನಡೆಸಲು ಉದ್ದೇಶಿಸಲಾಗಿದೆ. ಜನವರಿ 6,7 ಮತ್ತು 8ರಂದು ಪಂದ್ಯಾವಳಿಗಳು ನಡೆಯಲಿವೆ ಎಂದರು.
ಕಳೆದ ಎರಡು ವರ್ಷಗಳಿಂದಲೂ ಚೂರಿಗಿಡ್ನ ವೇಣು ಅವರು ಮುಖ್ಯಪ್ರಾಯೋಜಕ ರಾಗಿ ಅತ್ಯಂತ ಯಶಸ್ವಿಯಾಗಿ ಪಂದ್ಯಾವಳಿಗಳು ನಡೆದಿದ್ದು, ಪ್ರಸಕ್ತ ವರ್ಷ ಎಸ್.ವಿ. ಸುನಿಲ್ ಅವರ ತಂದೆಯ ಸ್ಮರಣಾರ್ಥ ಪಂದ್ಯಾವಳಿ ಆಯೋಜಿಸಿದ್ದು, ಒಲಂಪಿಯನ್ ಸುನಿಲ್ ಅವರು ಮುಖ್ಯ ಪ್ರಾಯೋಜಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಆಹ್ವಾನಿತ ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಒಂದು ತಂಡದಲ್ಲಿ ಐದು ಮಂದಿ ಅತಿಥಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ 50 ಸಾವಿರ ಬಹುಮಾನ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 30ಸಾವಿರ ಬಹುಮಾನ, ಟ್ರೋಫಿ ನೀಡಲಾಗುವದು. ಐದು ವೈಯುಕ್ತಿಕ ಬಹುಮಾನಗಳನ್ನು ಒಲಂಪಿಯನ್ ರಘುನಾಥ್ ಪ್ರಾಯೋಜಿಸಿದ್ದಾರೆ. ಒಟ್ಟಾರೆ ಪಂದ್ಯಾವಳಿಗೆ 8 ರಿಂದ 10ಲಕ್ಷ ವ್ಯಯವಾಗಲಿದೆ ಎಂದರು.
ಜನವರಿ 6 ರ ಬೆಳಿಗ್ಗೆ 9.30ಕ್ಕೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಆಟಗಾರರಾದ ಎಸ್.ವಿ. ಸುನಿಲ್, ರಘುನಾಥ್, ಹರಿಪ್ರಸಾದ್, ವಿನಯ್, ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಕಾಳಯ್ಯ, ಹಾಕಿ ಆಟಗಾರರಾದ ವಿಕ್ರಂಕಾಂತ್, ಅರ್ಜುನ್ ಹಾಲಪ್ಪ, ಹಿಂದಿನ ಪಂದ್ಯಾ ವಳಿಯ ಪ್ರಾಯೋಜಕ ಚೂರಿಗಿಡ್ನ ವೇಣು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಸೋಮವಾರಪೇಟೆಯಲ್ಲಿ ಆಟವಾಡಿದ ಹಲವಷ್ಟು ಪ್ರತಿಭೆಗಳು ಇಂದು ರಾಷ್ಟ್ರೀಯ ಹಾಕಿತಂಡದಲ್ಲಿ ಗುರುತಿಸಿಕೊಂಡಿವೆ. ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸ ಲಾಗಿದ್ದು, ಕ್ರೀಡಾಪ್ರೇಮಿಗಳು ಸಹಕರಿಸಬೇಕೆಂದು ಅಶೋಕ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಕ್ಲಬ್ನ ಉಪಾಧ್ಯಕ್ಷ ಬಂಗೀರಮನೆ ಸತೀಶ್, ಕಾರ್ಯದರ್ಶಿ ಪ್ರಜಾ ಪೂಣಚ್ಚ, ಖಜಾಂಚಿ ಅಭಿಷೇಕ್, ಸದಸ್ಯ ಮಂಜುನಾಥ್, ಮಹೇಶ್ ಅವರುಗಳು ಉಪಸ್ಥಿತರಿದ್ದರು.