ಮೂರ್ನಾಡು, ಅ. 24 : ಟೈಲರ್ಸ್ ಅಸೋಸಿಯೇಷನ್ ಸಂಘಟನೆಯಲ್ಲಿ ಮೂರ್ನಾಡು ವಲಯ ಸಮಿತಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿ ಮಾದರಿ ವಲಯ ಸಮಿತಿ ಆಗಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಕೆ.ಹೆಚ್. ಶೇಕ್ ಅಹಮ್ಮದ್ ಹರ್ಷ ವ್ಯಕ್ತಪಡಿಸಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂರ್ನಾಡು ವಲಯ ಸಮಿತಿಯ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸಮಿತಿ ದರ್ಜಿ ಬಾಂಧವರ ಹಿತರಕ್ಷಣೆಗಾಗಿ ಸಂಘಟನೆ ಮುಖಾಂತರ ರಾಜ್ಯ ಸರ್ಕಾರದೊಂದಿಗೆ ಹಲವು ಬೇಡಿಕೆಗಳನ್ನಿಟ್ಟು ಹೋರಾಟ ನಡೆಸುತ್ತಿದೆ. ಸರ್ಕಾರ ಇಂದು ಕೆಲವೊಂದು ಬೇಡಿಕೆಗಳಿಗೆ ಸ್ಪಂದನೆ ನೀಡಿದೆ. ಪ್ರಸ್ತುತದಲ್ಲಿ ಟೈಲರ್ ವೃತ್ತಿಯಲ್ಲಿ ಪುರುಷರ ಸಂಖ್ಯೆ ಕಡಿಮೆಗೊಂಡು ಮಹಿಳೆಯರ ಸಂಖ್ಯೆ ಅಧಿಕವಾಗುತ್ತಿದೆ. ಸದಸ್ಯರು ಪ್ರತಿವರ್ಷ ಸದಸ್ಯತ್ವವನ್ನು ನವೀಕರಿಸಿಕೊಂಡಲ್ಲಿ ಸಂಘಟನೆ ಮತ್ತಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಕರೆ ನೀಡಿದರು.

ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೆಮ್ಮಂಡ ಪವಿತ್ರ ಕುಂಞಪ್ಪ ಮಾತನಾಡಿ ಸಂಘಟನೆಗಳ ಮೂಲಕ ವೃತ್ತಿಗಾರರು ಸರ್ಕಾರದೊಂದಿಗೆ ಬೇಡಿಕೆಗಳನ್ನು ಇಟ್ಟು ಹೋರಾಟ ನಡೆಸುತ್ತಿದ್ದು ಸರ್ಕಾರ ಇದರ ಕುರಿತು ಚಿಂತನೆ ನಡೆಸುವಂತಾಗಬೇಕು ಎಂದು ತಿಳಿಸಿದರು.

ಕೆಎಸ್‍ಟಿಎ ಮೂರ್ನಾಡು ವಲಯ ಸಮಿತಿ ಅಧ್ಯಕ್ಷ ಬಿ.ಎನ್. ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಟಿಎ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಕೆ.ಎಸ್. ಮಮತ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಿ.ಎ. ವಿಠಲ, ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಎ.ಪಿ. ತುಳಸಿ ಮಾತನಾಡಿದರು.

ಈ ಸಂದರ್ಭ ಹಿರಿಯ ವೃತ್ತಿದಾರರಾದ ವಿ.ಎಸ್. ಸರೋಜ ಅವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಲಯ ಸಮಿತಿ ಉಪಾಧ್ಯಕ್ಷೆ ಎಸ್.ಟಿ. ರೋಶ್ಲಿ, ಕಾರ್ಯದರ್ಶಿ ಪಿ.ಎಸ್. ಗೋಪಾಲ, ಸಂಘಟನಾ ಕಾರ್ಯದರ್ಶಿ ಎಸ್.ಆರ್. ಜ್ಯೋತಿ, ಖಜಾಂಚಿ ಎ. ಸಜೀವ, ಸದಸ್ಯ ಎಂ.ಜಿ. ಅನಿಸ್, ಎಂ.ಟಿ. ಜಾನಕಿ, ಆರ್. ಮಂಜು, ಬಿ.ಪಿ. ನಂಜಮ್ಮ ಇತರರು ಹಾಜರಿದ್ದರು. ಸಮಿತಿ ಸದಸ್ಯರಿಗೆ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.