ಶ್ರೀಮಂಗಲ, ನ. 9: ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತ ಕ್ರಮವಾಗಿ ಟಿ.ಶೆಟ್ಟಿಗೇರಿ ಗ್ರಾ.ಪಂ. ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಯಿತು.ಈ ಸಂದರ್ಭ ಕುಟ್ಟ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾತನಾಡಿದರು. ಟಿಪ್ಪು ಜಯಂತಿ ಸಂದರ್ಭ ಯಾವದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ವೀರಾಜಪೇಟೆ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಜನರ ವಿರೋಧವನ್ನು ಕಡೆಗಣಿಸಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಸರಕಾರದ ವಿರುದ್ಧ ಶಾಂತಿಯುತವಾಗಿ ಪ್ರಜಾಪ್ರಭುತ್ವದ ಅಡಿ ಪ್ರಜೆಗಿರುವ ಹಕ್ಕಿನಂತೆ ಪ್ರತಿಭಟನೆ ಮಾಡಲಾಗುವದು. ಸರಕಾರ ಬಲವಂತವಾಗಿ ಜನರ ಪ್ರತಿಭಟನೆ ಮಾಡುವ ಹಕ್ಕನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದÀರ್ಭ ಗ್ರಾ.ಪಂ ಅಧ್ಯಕ್ಷ ಮಚ್ಚಮಾಡ ಸುಮಂತ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರು ಮಾತನಾಡಿ, ಟಿಪ್ಪು ಜಯಂತಿ ಆಚರಣೆಯನ್ನು ಇದೀಗ ಒಳಾಂಗಣದಲ್ಲಿ ಸರಳವಾಗಿ ಆಚರಿಸಲು ಸರಕಾರ ಮುಂದಾಗಿರುವದಕ್ಕೆ ಸಹ ತಮ್ಮ ವಿರೋಧವಿದೆ. ಯಾವದೇ ಕಾರಣಕ್ಕೆ ಈ ಆಚರಣೆ ಮಾಡುವದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು. ಈ ಸಂದರ್ಭ ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್ ಹಾಜರಿದ್ದರು.