ಸೋಮವಾರಪೇಟೆ, ಜು. 21: ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸುವವರು, ತ್ಯಜಿಸಿ ಬೇರೆ ಧರ್ಮವನ್ನು ಅಪ್ಪಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಹಿಂದೂ ಧರ್ಮಕ್ಕೆ ವಿದೇಶಿಯರು ಹೆಚ್ಚಾಗಿ ಆಕರ್ಷಿತರಾಗುತ್ತಿರುವದನ್ನು ಆಗಾಗ್ಗೆ ಕಂಡಿದ್ದೇವೆ. ಕಾಣುತ್ತಲೂ ಇದ್ದೇವೆ. ಈ ಮಧ್ಯೆ ಟಿಪ್ಪು ಸುಲ್ತಾನ್ ಹೆಸರಿನ ಮುಸ್ಲಿಂ ವ್ಯಕ್ತಿಯೋರ್ವರು ಆ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಅಪ್ಪಿಕೊಂಡಿದ್ದಲ್ಲದೆ, ಸ್ವಾಮೀಜಿಯಾಗಿ ಪರಿವರ್ತನೆ ಗೊಂಡಿದ್ದು, ಮಠವನ್ನು ಮುನ್ನಡೆಸುತ್ತಿ ದ್ದಾರೆ. ಉತ್ತರ ಕರ್ನಾಟಕ ಭಾಗದ ಗುಲ್ಬರ್ಗದಲ್ಲಿ ಸ್ವಾಮೀಜಿಯಾಗಿರುವ ಇವರು ಸೋಮವಾರಪೇಟೆಯ ಬೇಳೂರು ಮಠದಲ್ಲಿ ಮಾತಿಗೆ ಸಿಕ್ಕರು.
ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕು ಕಡಕೊಳ ಊರಿನ ಟಿಪ್ಪು ಸುಲ್ತಾನ್ ಅವರು ತಮ್ಮ ಎಂ.ಎ. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತದನಂತರ ಚಿತ್ರದುರ್ಗದ ಬಸವ ಕೇಂದ್ರ ಮುರುಘಾಮಠದ ಪೀಠಾಧ್ಯಕ್ಷರಾದ ಶ್ರೀಮುರುಘಾ ಶರಣರ ಸಾನ್ನಿಧ್ಯ ಬಯಸಿ ಒಮ್ಮೆ ಮಠಕ್ಕೆ ಭೇಟಿ ನೀಡಿದ್ದರು. ಪೀಠಾಧ್ಯಕ್ಷರಾದ ಮುರುಘಾಶ್ರೀಗಳ ಪ್ರಭಾವ, ಚಿಂತನೆಗಳಿಗೆ ಮಾರುಹೋಗಿ ಧರ್ಮವನ್ನೇ ಬದಲಾಯಿಸಿಕೊಂಡು ಇದೀಗ ಸ್ವಾಮೀಜಿಯಾಗಿ ಮಠದ ಭಕ್ತರಿಗೆ, ಸಾರ್ವಜನಿಕರಿಗೆ ಧಾರ್ಮಿಕ ಉಪನ್ಯಾಸ, ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ಹಿಂದೆ ಇದ್ದ ಟಿಪ್ಪು ಸುಲ್ತಾನ್ ಹೆಸರು ಬದಲಾಗಿದ್ದು, ಇದೀಗ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಎಂಬದಾಗಿ ಮರುನಾಮಾಂಕಿತ ವಾಗಿದೆ. ಪ್ರಸ್ತುತ ಗುಲ್ಬರ್ಗಾದಲ್ಲಿ ಮರಳಿ ಶಂಕರ ದೇವರ ಮಠದ ಮಠಾಧಿಪತಿಗಳಾಗಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿದ್ದಾರೆ.
ಸ್ವಧರ್ಮ ತ್ಯಜಿಸಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡ ಸಂದರ್ಭ ತಮ್ಮ ಸಮುದಾಯದಿಂದಲೇ ಭಾರೀ ಒತ್ತಡ ಬಂದಿತ್ತು. ಅದನ್ನೆಲ್ಲಾ ಮೀರಿ ಮುರುಘಾ ಶರಣರ ಸಾನ್ನಿಧ್ಯದಲ್ಲೇ ಉಳಿದುಕೊಂಡೆ, ಸ್ವಾಮೀಜಿಗಳು ಕೈಬಿಡದೇ, ಕೈಹಿಡಿದು ಮುನ್ನಡೆಸಿದರು. ದೀಕ್ಷೆಯ ನಂತರ ಮಠದ ಉಸ್ತುವಾರಿ ನೀಡಿದರು. ಮುರುಘಾಶ್ರೀಗಳ ಮಾರ್ಗದರ್ಶನದಡಿ ಅಪರಿಮಿತ ಬದ್ಧತೆಯೊಂದಿಗೆ ಧಾರ್ಮಿಕ ಜಾಗೃತಿ, ಭಕ್ತರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ಸಿದ್ಧಬಸವ ಕಬೀರ ಸ್ವಾಮೀಜಿ ಅವರು ‘ಶಕ್ತಿ’ಯೊಂದಿಗೆ ಮಾತನಾಡುತ್ತಾ ತಿಳಿಸಿದರು. - ವಿಜಯ್