ಕುಶಾಲನಗರ, ಅ. 22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಆಚರಣೆಗೆ ಸಂಬಂಧಿಸಿದಂತೆ ಕುಶಾಲನಗರದ ವಿವಿಧ ಸಮಾಜಗಳ ಪ್ರಮುಖರು ವಿರೋಧ ವ್ಯಕ್ತಪಡಿಸಿ ದ್ದಾರೆ. ರಾಜ್ಯ ಸರಕಾರ ಯಾವದೇ ಕಾರಣಕ್ಕೂ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯ ಕೊಡವ ಸಮಾಜ, ಗೌಡ ಸಮಾಜ, ಹಿಂದೂ ಮಲೆಯಾಳಿ ಸಂಘ, ಬಣ್ಣರ ಸಂಘ, ನಾಮಧಾರಿ ಗೌಡ ಸಮಾಜದ ಪದಾಧಿಕಾರಿಗಳು ಹೇಳಿಕೆ ನೀಡಿ, ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ಮೂಲಕ ಅಶಾಂತಿ ವಾತಾವರಣ ನಿರ್ಮಾಣ ಸೃಷ್ಟಿ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆರೋಪಿಸಿದರು. ಈ ಸಂಬಂಧ ಟಿಪ್ಪು ಜಯಂತಿ ಆಚರಿಸದಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು.

ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯ ಮೂಲಕ ಜಿಲ್ಲೆಯಲ್ಲಿ ಜನಾಂಗಗಳ ನಡುವೆ ಸಾಮರಸ್ಯ ಹದಗೆಡುತ್ತಿದೆ. ಕೊಡಗಿನ ಮೂಲ ನಿವಾಸಿಗಳನ್ನು ಮತಾಂತರಗೊಳಿಸಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ನಾಶಗೊಳಿಸಿದ ಟಿಪ್ಪುವಿನ ಜಯಂತಿ ಆಚರಣೆಗೆ ಸರಕಾರ ಅವಕಾಶ ಕಲ್ಪಿಸಬಾರದು. ಒಂದು ವೇಳೆ ಟಿಪ್ಪು ಜಯಂತಿ ಆಚರಿಸಿದಲ್ಲಿ ಮುಂದೆ ಉಂಟಾಗಲಿರುವ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ ಎಂದರು.

ಗೌಡ ಸಮಾಜದ ಅಧ್ಯಕ್ಷರಾದ ಕೇಚಪ್ಪನ ಮೋಹನ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸರ್ವ ಧರ್ಮೀಯರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಕಳೆದ 300-400 ವರ್ಷಗಳಿಂದ ಇಲ್ಲದಂತಹ ಆಚರಣೆಯನ್ನು ಕಳೆದ ವರ್ಷ ರಾಜ್ಯ ಸರಕಾರ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ ಕದಡುವ ಮೂಲಕ ಇಬ್ಬರ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ ಅವರು ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ಸಂಪೂರ್ಣ ವಿರೋಧವಿದೆ. ರಾಜಕೀಯ ದುರುದ್ದೇಶದಿಂದ ಈ ಆಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕಲ್ಪಿಸದಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು.

ಹಿಂದೂ ಮಲೆಯಾಳಿ ಸಮಾಜದ ಉಪಾಧ್ಯಕ್ಷ ಕೆ.ವರದ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಜಯಂತ್ಯೋತ್ಸವ ಆಚರಣೆ ಪದ್ಧತಿಯೇ ಇಲ್ಲದಿರುವಾಗ ರಾಜ್ಯ ಸರಕಾರ ಬಲವಂತವಾಗಿ ಟಿಪ್ಪು ಜಯಂತಿ ಆಚರಿಸುವ ಮೂಲಕ ಜನಾಂಗಗಳ ನಡುವೆ ವೈಷಮ್ಯ ಮೂಡಿಸುತ್ತಿದೆ ಎಂದು ತಿಳಿಸಿದ ಅವರು, ಬಲವಂತವಾಗಿ ಆಚರಿಸುವ ದಾದರೆ ಕುಟ್ಟಪ್ಪ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಬಣ್ಣರ ಸಂಘದ ಜಿಲ್ಲಾಧ್ಯಕ್ಷರಾದ ತೆಕ್ಕಡಮಂಡ ಕೆ. ಸುಬ್ಬಯ್ಯ, ನಾಮಧಾರಿ ಗೌಡ ಸಮಾಜದ ಜಿಲ್ಲಾ ಕಾರ್ಯದರ್ಶಿ ಹೆಚ್.ಹೆಚ್. ಸುಂದರ್, ಕೊಡವ ಸಮಾಜದ ಕಾರ್ಯದರ್ಶಿ ಪುಲಿಯಂಡ ಎಂ. ಚಂಗಪ್ಪ, ನಿರ್ದೇಶಕರಾದ ಸೋಮೆಯಂಡ ಉದಯ, ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಗೌಡ ಸಮಾಜದ ಕಾರ್ಯದರ್ಶಿ ಬೈಮನ ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಹಾಲುಗುಂಜಿ ಕೃಷ್ಣಮೂರ್ತಿ, ನಿರ್ದೇಶಕರಾದ ಕೂರನ ಪ್ರಕಾಶ್, ಹಿಂದೂ ಮಲೆಯಾಳಿ ಸಮಾಜದ ಕಾರ್ಯದರ್ಶಿ ರಂಜಿತ್ ಇದ್ದರು.