ಮಡಿಕೇರಿ, ನ. 7: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಇಂದು ಜಿಲ್ಲಾಡಳಿತ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರಾದ ಅಜಿತ್ ಕುಮಾರ್, ಚೇತನ್, ಗಣೇಶ್, ಧನಂಜಯ, ಪ್ರಸನ್ನಭಟ್ ಇತರರು ಮಾತನಾಡಿ, ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಶೇ. 90ರಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಬಾರಿ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸಿ ಸಂಭವಿಸಿದ್ದ ಅನಾಹುತದ ಬಗ್ಗೆ ಎಲ್ಲರಿಗೂ ಅರಿವಿದೆ. ಹೀಗಿರುವಾಗ ಮತ್ತೊಮ್ಮೆ ಟಿಪ್ಪು ಜಯಂತಿ ಆಚರಿಸುವದಕ್ಕೆ ಅವಕಾಶ ನೀಡುವದು ಬೇಡ. ಅಲ್ಪಸಂಖ್ಯಾತರಿಗೆ ಬೇರೆ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿ. ಅದನ್ನು ಬಿಟ್ಟು ಟಿಪ್ಪು ಜಯಂತಿ ಹೆಸರಿನಲ್ಲಿ ಕೊಡಗಿನಲ್ಲಿ ಜನಾಂಗಗಳ ನಡುವಿನ ಸಾಮರಸ್ಯ ಕದಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧವಿರುವ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ನೀಡಲಾಗಿದೆ. ಆದರೆ ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವಾದ್ದರಿಂದ ಸರ್ಕಾರದ ಆದೇಶದಂತೆ ಶಾಂತ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಶಾಂತಿ ಸಭೆ ಕರೆಯಲಾಗಿದ್ದು, ಸಹಕರಿಸುವಂತೆ ಕೋರಿದರು.

ಆದರೆ ಇದಕ್ಕೆ ಸಮ್ಮತಿಸದ ಹಿಂದೂಪರ ಸಂಘಟನೆಗಳು ಕೊಡಗಿನಲ್ಲಿ ವಿರೋಧವಿದ್ದಾಗ್ಯೂ

(ಮೊದಲ ಪುಟದಿಂದ) ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸುವಿರಾ ಇಲ್ವಾ ಎಂಬದನ್ನು ಖಚಿತಪಡಿಸಿ ಎಂದು ಆಗ್ರಹಿಸಿದರು. ಸರ್ಕಾರದ ಆದೇಶದಂತೆ ಆಚರಣೆ ಮಾಡುವದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಟಿಪ್ಪು ಜಯಂತಿಗೆ ಧಿಕ್ಕಾರ ಎಂಬ ಘೋಷಣೆ ಕೂಗುತ್ತಾ ಸಭೆಯನ್ನು ಬಹಿಷ್ಕರಿಸಿ ತೆರಳಿದರು.

ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೆರಳುತ್ತಿದ್ದಂತೆಯೇ ಸಭೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಕೊಡಗಿನವರಾಗಲಿ, ಕರ್ನಾಟಕ ದವರಾಗಲಿ ಟಿಪ್ಪು ಜಯಂತಿ ಆಚರಣೆಗೆ ಒತ್ತಾಯ ಮಾಡಿಲ್ಲ. ಹೀಗಿದ್ದರೂ ಶಾಂತಿ ಕದಡಿ ಜನರ ನೆಮ್ಮದಿ ಹಾಳು ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂಬದಕ್ಕೆ ಸಾಕ್ಷಿಗಳಿದ್ದೂ ಕೂಡ ಆತನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವದೆಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಟಿಪ್ಪು ಜಯಂತಿ ಹೆಸರಿನಲ್ಲಿ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು. ಕೊಡಗಿನಲ್ಲಿ ಬಿಜೆಪಿ ಪ್ರಾಬಲ್ಯವಿದ್ದು, ಟಿಪ್ಪು ಜಯಂತಿಗೆ ನಮ್ಮ ವಿರೋಧವಿದೆ. ಜನರ ಅಭಿಪ್ರಾಯಕ್ಕೆ ಒತ್ತು ನೀಡದ ಸಭೆಯಲ್ಲಿ ನಾವು ಕೂಡ ಇರುವದಿಲ್ಲ ಎಂದು ಹೇಳಿ ಹೊರನಡೆದರು.

ನಗರಸಭಾ ಸದಸ್ಯ ಮನ್ಸೂರ್ ಮಾತನಾಡಿ, ಟಿಪ್ಪು ಜಯಂತಿ ಹೆಸರಿನಲ್ಲಿ ತನ್ನ ಮೇಲೆ ಹಾಗೂ ಹಲವರ ಮೇಲೆ 107 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ. ಇದೆಷ್ಟು ಸರಿ ಎಂದು ಪ್ರಶ್ನಿಸಿದರು. ಕಳೆದ ಬಾರಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಮುಚ್ಚಳಿಕೆ ಪಡೆದುಕೊಳ್ಳಲಾಗುತ್ತಿದೆ ಹೊರತು ಬೇರಾವದೇ ದುರುದ್ದೇಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹೇಳಿದರು.

ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ, ಕಳೆದ ಬಾರಿ ಜಿಲ್ಲಾಡಳಿತದ ಆಹ್ವಾನಕ್ಕೆ ಗೌರವ ಕೊಟ್ಟು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅಮಾಯಕರ ಮೇಲೆ ಹಲ್ಲೆ ನಡೆದಿದೆ. ಆದ್ದರಿಂದ ಈ ಬಾರಿ ಜಿಲ್ಲಾಡಳಿತ ಆಹ್ವಾನ ನೀಡುವದೇ ಆದರೆ ಆಗಮಿಸುವ ಜನರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ಹೇಳಿದರು.

ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಮಾತನಾಡಿ, ಸರ್ಕಾರ ಆಚರಿಸುವ ಎಲ್ಲಾ ಜಯಂತಿ ಗಳಂತೆ ಟಿಪ್ಪು ಜಯಂತಿ ಕೂಡ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಯಲಿ. ಯಾರನ್ನೂ ಕೂಡ ಆಹ್ವಾನಿಸುವದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.