ಗೋಣಿಕೊಪ್ಪಲು, ನ. 9: ಇಲ್ಲಿನ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಟಿಪ್ಪು ಜಯಂತಿ ಆಚರಣಾ ಪೊಲೀಸ್ ಶಾಂತಿ ಸಭೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ವೃತ್ತ ನಿರೀಕ್ಷಕ ಪಿ.ಕೆ. ರಾಜು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಪೊನ್ನಂಪೇಟೆ, ಗೋಣಿಕೊಪ್ಪ ವ್ಯಾಪ್ತಿಯ ವಿವಿಧ ವರ್ಗಗಳ ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಮಾತನಾಡಿದ ರಾಜು, ಸರ್ಕಾರದ ಆಚರಣೆಗೆ ಸಾರ್ವಜನಿಕರು ಯಾವದೇ ಅಹಿತಕರ ಘಟನೆ ನಡೆಯದಂತೆ ಸ್ಪಂದಿಸಬೇಕು. ಯಾವದೇ ದುಷ್ಟಶಕ್ತಿಗಳು ಜಿಲ್ಲೆಯ ಗಡಿ ನುಸುಳದಂತೆ ಇಲಾಖೆ ಕ್ರಮಕೈಗೊಂಡಿದೆ. ಗಡಿ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕ್ರಮಕ್ಕೆ ಮುಂದಾಗಿದ್ದೇವೆ. ಗೋಣಿಕೊಪ್ಪ, ಪೊನ್ನಂಪೇಟೆಯಲ್ಲಿ ಪೊಲೀಸ್ ಪಥ ಸಂಚಲನ ನಡೆಸುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವದು ಎಂದರು.
ನಾವು ಟಿಪ್ಪು ಜಯಂತಿ ಆಚರಿಸಲು ಕೇಳಿರಲಿಲ್ಲ. ಮಸೀದಿಗಳಲ್ಲಿ ಆಚರಣೆ ನಡೆಯುವದಿಲ್ಲ ಎಂದು ಸ್ಥಳೀಯರಾದ ಅಬ್ದುಲ್ ಸಮ್ಮದ್ ಹೇಳಿದರು.
ಸರ್ಕಾರ ಟಿಪ್ಪು ಜಯಂತಿ ಮೂಲಕ ಟಿಪ್ಪು ಕ್ರೌರ್ಯಕ್ಕೆ ಪ್ರಚೋದನೆ ನೀಡುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಹಿಂದೂ ಸಂಘಟನೆ ಮುಖಂಡ ಚೆಕ್ಕೇರ ಮನು ಹೇಳಿದರು.
ಈ ಸಂದರ್ಭ ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ಪೊಲೀಸ್ ಉಪ ನಿರೀಕ್ಷಕರುಗಳಾದ ಎಸ್. ಎನ್. ಜಯರಾಂ, ಗೋವಿಂದಮೂರ್ತಿ ಹಾಗೂ ರಾಜು ಉಪಸ್ಥಿತರಿದ್ದರು.