ಮಡಿಕೇರಿ, ನ. 3: ಕೊಡಗು ಜಿಲ್ಲೆಗೆ ಯಾವದೇ ಕೊಡುಗೆಯನ್ನು ನೀಡದ ಟಿಪ್ಪು ಕೊಡಗನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲದೆ, ಮತಾಂತರ ಮತ್ತು ದೇವಾಲಯಗಳನ್ನು ಭಗ್ನಗೊಳಿಸಿದ ವಿವಾದಿತ ವ್ಯಕ್ತಿ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿಯ ಹಿಂದುಳಿದ ಮೋರ್ಚಾ, ಟಿಪ್ಪು ಜಯಂತಿ ಆಚರಿಸಿದರೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ವೈ. ಆನಂದ ರಘು, ಸರ್ವ ಜನರ ಇಚ್ಛೆಗೆ ವಿರುದ್ಧವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಕೈಗೊಂಡಿ ರುವ ಏಕ ನಿರ್ಧಾರ ಖಂಡನೀಯ ವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ವ್ಯಕ್ತಿಯ ಜಯಂತಿ ಆಚರಣೆ ಸ್ವತಃ ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಮಾರಿ ಧೋರಣೆಯನ್ನು ಅನುಸರಿಸುತ್ತಿದ್ದಾ ರೆಂದು ಟೀಕಿಸಿದರು.
ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯ ನಿರ್ಧಾರದಿಂದ ತಕ್ಷಣ ಹಿಂದಕ್ಕೆ ಸರಿಯಬೇಕು ಮತ್ತು ಕೊಡಗಿನ ಜನರ ಕ್ಷಮೆ ಯಾಚಿಸ ಬೇಕೆಂದು ಒತ್ತಾಯಿಸಿರುವ ಆನಂದ ರಘು, ತಪ್ಪಿದಲ್ಲಿ ನ.10 ರಂದು ಉಗ್ರ ರೀತಿಯ ಹೋರಾಟ ನಡೆಸಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾ. 27 ರಂದು ಸಮಾವೇಶ: ಬಿಜೆಪಿಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ತಾ. 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆಂದು ಅವರು ಇದೇ ಸಂದರ್ಭ ತಿಳಿಸಿದರು. ಈ ಏಕತಾ ಸಮಾವೇಶದಲ್ಲಿ ರಾಜ್ಯದ ಸುಮಾರು 3 ಲಕ್ಷ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಕೊಡಗು ಜಿಲ್ಲೆಯಿಂದಲೂ 3 ಸಾವಿರ ಮಂದಿ ತೆರಳಲಿದ್ದಾರೆ ಎಂದು ಆನಂದ ರಘು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜು, ಕಾರ್ಯದರ್ಶಿ ಜಿ.ಜಿ. ಬಾಲಕೃಷ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಸಿ. ಜೀವನ್, ಹಾಗೂ ನಗರಾಧ್ಯಕ್ಷ ಸುಕುಮಾರ್ ಉಪಸ್ಥಿತರಿದ್ದರು.