ಸೋಮವಾರಪೇಟೆ, ಅ. 18: ಕೊಡಗು ಜಿಲ್ಲೆಯಲ್ಲಿ ಕೊಡವರ ನರಮೇಧ ನಡೆಸಿದ ಟಿಪ್ಪುವಿನ ಜಯಂತಿಯನ್ನು ಯಾವದೇ ಕಾರಣಕ್ಕೂ ಆಚರಿಸಬಾರದು. ಶಾಶ್ವತವಾಗಿ ಸರಕಾರ ಆಚರಣೆಯನ್ನು ನಿಷೇಧಿಸಬೇಕೆಂದು ಇಲ್ಲಿನ ಕೊಡವ ಸಮಾಜ ಆಗ್ರಹಿಸಿದೆ.

ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಕುರಿತಾಗಿ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಮುಂದೆಂದೂ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಯವರ ಮೂಲಕ ಸೋಮವಾರಪೇಟೆ ಕೊಡವ ಸಮಾಜವು ಮನವಿ ಸಲ್ಲಿಸಲಿದೆ ಎಂದರು.

ಸರ್ಕಾರ ವೈಭವೀಕರಿಸಿರುವಂತೆ ಟಿಪ್ಪು ದಾರ್ಶನಿಕ ಅಥವಾ ದೇಶಭಕ್ತನಲ್ಲ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಹೋರಾಟ ನಡೆಸಿದ್ದಾನೆಯೇ ಹೊರತು ಅಪ್ರತಿಮ ಹೋರಾಟಗಾರನಲ್ಲ. ಹಿಂದೂಗಳ ಭಾವನಾತ್ಮಕ ಶ್ರದ್ಧಾ ಕೇಂದ್ರವಾದ ದೇವಸ್ಥಾನಗಳನ್ನು ಧ್ವಂಸ ಮಾಡಿರುವದಕ್ಕೆ ಇಂದಿಗೂ ಕೊಡಗಿನಲ್ಲಿ ಅಳಿದುಳಿದಿರುವ ಭಗ್ನಾವಶೇಷವಾದ ದೇವಾಲಯಗಳು ಮೂಖ ಸಾಕ್ಷಿಯಾಗಿ ಎಲ್ಲರ ಕಣ್ಣೆದುರಿಗಿದೆ. ಕೊಡವ ಜನಾಂಗದ ಗಂಡಸರು, ಹೆಂಗಸರನ್ನು ಮಾನವೀಯತೆ ಮರೆತು ತನ್ನ ಸೈನಿಕರ ಮೂಲಕ ಮೋಸದಿಂದ ಹತ್ಯೆಗೈದವನ ಆಚರಣೆ ಅಕ್ಷಮ್ಯ ಅಪರಾಧ ಎಂದರು.

ಕಳೆದ ವರ್ಷ ಜಿಲ್ಲೆಯ ಜನತೆಯ ತೀವ್ರ ವಿರೋಧದ ನಡುವೆ ಸರಕಾರದ ಆದೇಶದ ಮೇರೆಗೆ ಟಿಪ್ಪು ಜಯಂತಿಯನ್ನು ಆಚರಿಸಿದ ಸಂದರ್ಭ ಹಲವು ದುರ್ಘಟನೆಗಳು ನಡೆದಿವೆÉ. ಟಿಪ್ಪುವಿನ ಜನ್ಮ ದಿನಾಚರಣೆಯ ನಿರ್ಧಾರವನ್ನು ಸರಕಾರ ಗಂಭೀರ ವಾಗಿ ಪರಿಗಣಿಸಿ ಆಚರಣೆಯನ್ನು ಕೈಬಿಡಬೇಕು. ಈ ವಿಷಯದಲ್ಲಿ ಕೊಡವ ಸಮಾಜದ ವಿರೋಧವನ್ನು ಗಂಭೀರವಾಗಿ ಪರಿಗಣಿಸದೆ ತಮ್ಮ ಧೋರಣೆಯನ್ನು ಮುಂದುವರೆಸಿದಲ್ಲಿ ಮುಂದಾಗ ಬಹುದಾದ ಅನಾಹುತಗಳಿಗೆ ಸರಕಾರವೇ ಜವಾಬ್ದಾರಿಯಾಗ ಬೇಕಾಗುತ್ತದೆ.

ನಮ್ಮ ಒತ್ತಾಯ ಯಾವದೇ ಧರ್ಮದ ಅಥವಾ ಜಾತಿಯ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೇವಲ ಮತಬ್ಯಾಂಕ್ ಸೃಷ್ಟಿಸುವ ಉದ್ದೇಶದಿಂದ ಸರಕಾರವು ಟಿಪ್ಪು ಜಯಂತಿ ಆಚರಣೆಯನ್ನು ನಡೆಸಲು ಮುಂದಾಗಿರುವದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಬಾಚಿನಾಡಂಡ ಪೂಣಚ್ಚ, ಕಾರ್ಯದರ್ಶಿ ಮೇರಿಯಂಡ ಉತ್ತಪ್ಪ, ಪದಾಧಿಕಾರಿಗಳಾದ ಕಲ್ಲೇಂಗಡ ಅಪ್ಪಚ್ಚು, ಕುಂಞÂೀರ ಅಯ್ಯಪ್ಪ, ನಾಪಂಡ ಕುಶಾಲಪ್ಪ ಉಪಸ್ಥಿತರಿದ್ದರು.