ಮಡಿಕೇರಿ, ನ.2: ಇದೇ ತಾ. 10 ರಂದು ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಜಯಂತಿ ಸಂದರ್ಭದಲ್ಲಿ ಯಾವದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಹೋಂ ಸ್ಟೇಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿರಬೇಕು. ಜೊತೆಗೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
“ಸಾರ್ವಜನಿಕ ಸ್ಥಳಗಳಲ್ಲಿ ಯಾವದೇ ರೀತಿಯ ಪೋಸ್ಟರ್, ಬ್ಯಾನರ್ ಅಳವಡಿಸುವಂತಿಲ್ಲ, ಹಾಗೆಯೇ ಸಾರ್ವಜನಿಕವಾಗಿ ಬಳಸುವ ಅಥವಾ ಬಳಕೆಯಾಗುವ ವಾಹನಗಳಲ್ಲಿ (ಆಟೋ, ಜೀಪು ಇತರ) ಪೋಸ್ಟರ್, ಬ್ಯಾನರ್, ಧ್ವಜ ಅಳವಡಿಸುವಂತಿಲ್ಲ, ಅಳವಡಿಸುವಂತಾದರೆ ಪೊಲೀಸ್ ಇಲಾಖೆಯ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ದಸರಾ ಸಂದರ್ಭದಲ್ಲಿ ಅಳವಡಿಸಲಾಗಿರುವ ಪೋಸ್ಟರ್, ಬ್ಯಾನರ್‍ಗಳನ್ನು ಇನ್ನೂ ತೆರವುಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ಅವರು ಅತೃಪ್ತಿ ವ್ಯಕ್ತಪಡಿಸಿದರು.”
ವಾಹನ, ಹೋಂಸ್ಟೇ, ಲಾಡ್ಜ್ ತಪಾಸಣೆಯನ್ನು ರ್ಯಾಂಡಮೈಸ್ ಆಗಿ ಮಾಡಬೇಕು. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಹೊರತುಪಡಿಸಿದರೆ ಸಾರ್ವಜನಿಕವಾಗಿ ಬೇರೆ ಕಡೆ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವದು ಕಂಡುಬಂದರೆ ಅಂತವರ ವಿರುದ್ಧ ನಿದ್ರ್ಯಾಕ್ಷಿಣ್ಯ ಹಾಗೂ ನಿಷ್ಠುರವಾಗಿ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ ಮಡಿಕೇರಿ ದಸರಾ, ತುಲಾ ಸಂಕ್ರಮಣ ಜಾತ್ರೆ, ರಂಜಾನ್, ಬಕ್ರೀದ್ ಹಬ್ಬಗಳನ್ನು ಶಾಂತಿಯುತ ಹಾಗೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಹಾಗೆಯೇ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಬೇಕಿದೆ. ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇದೊಂದು ಸವಾಲು ಆಗಿದ್ದು, ಜಯಂತಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ ಎಂದುಹೇಳಿದರು. ಟಿಪ್ಪು ಜಯಂತಿ ಸಂಬಂಧ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತದೊಂದಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಗಡಿ ಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆ, ಕರಿಕೆ ಹೀಗೆ ಒಟ್ಟು 10 ಕಡೆಗಳಲ್ಲಿ ಚೆಕ್‍ಪೊಸ್ಟ್‍ಗಳನ್ನು ತೆರೆಯಲಾಗಿದ್ದು, ಒಂದು ಚೆಕ್ ಪೋಸ್ಟ್‍ನಲ್ಲಿ ತಲಾ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಚೆಕ್ ಪೋಸ್ಟ್‍ಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ನಾಕಾಬಂದಿ ಮಾದರಿಯಲ್ಲಿ ವಾಹನಗಳು, ಹೋಂಸ್ಟೇಗಳು ಹಾಗೂ ಲಾಡ್ಜ್‍ಗಳಲ್ಲಿ ತಪಾಸಣೆ ಮಾಡಿ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಸಾರ್ವಜನಿಕರು ಕಿರಿಕಿರಿ ಎಂದು ಭಾವಿಸದೆ ತಪಾಸಣೆಗೆ ಸಹಕರಿಸುವಂತೆ ಪಿ.ರಾಜೇಂದ್ರ ಪ್ರಸಾದ್ ಕೋರಿದರು.
ಶಾಂತಿ ಸುವ್ಯವಸ್ಥೆ ಕಾಪಾಡುವದು ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ಜವಾಬ್ದಾರಿಯಾಗಿದೆ. ಆ ದಿಸೆಯಲ್ಲಿ ಪೊಲೀಸರು ತಮ್ಮ ವೃತ್ತಿ ಧರ್ಮವನ್ನು ಅರಿತು ಕರ್ತವ್ಯ ನಿರ್ವಹಿಸಬೇಕಿದೆ. ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನುಡಿದರು.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಎಲ್ಲಿ ಆಯೋಜಿಸಬೇಕು ಎಂಬ ಬಗ್ಗೆ ನಂತರ ನಿರ್ಧರಿಸಲಾಗುವದು, ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ತಹಶೀಲ್ದಾರರು, ತಾ.ಪಂ.ಇಒ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಯವರು ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಸಲಹೆ ಮಾಡಿದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇ ಗೌಡ, ತಹಶೀಲ್ದಾರರಾದ ಕುಸುಮ, ಮಹದೇವಸ್ವಾಮಿ, ಕೃಷ್ಣ, ತಾ.ಪಂ. ಇಒಗಳಾದ ಪಡ್ನೇಕರ್, ಸತ್ಯನಾರಾಯಣ, ಜೀವನ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಛಬ್ಬಿ, ನಾಗಪ್ಪ, ಸಂಪತ್‍ಕುಮಾರ್, ನಗರಸಭೆ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಪ.ಪಂ.ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಶ್ರೀಧರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ಪೊಲೀಸ್ ಅಧಿಕಾರಿಗಳಾದ ಮೇದಪ್ಪ, ಭರತ್, ಪ್ರದೀಪ್, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರರಾದ ಪ್ರವೀಣ್ ಕುಮಾರ್ ಇತರರು ಇದ್ದರು.