ಮಡಿಕೇರಿ, ನ. 4: ಟಿಪ್ಪು ಜಯಂತಿ ಪರ - ವಿರೋಧ ಬಣಗಳು ವಿವಿಧ ರೀತಿಯ ಮೆರವಣಿಗೆ, ಪ್ರತಿಭಟನೆಗಳನ್ನು ತಾ. 8 ರಿಂದ ಆಯೋಜಿಸಿರುವದರಿಂದ ಜನರಲ್ಲಿ ಭದ್ರತಾ ಭಾವನೆ ಮೂಡಿಸಲು ಹಾಗೂ ಪೊಲೀಸ್ ತಯಾರಿ ಪ್ರದರ್ಶಿಸಲು ಮಡಿಕೇರಿಯ ವಿವಿಧ ಠಾಣಾ ಪೊಲೀಸರು ಇಂದು ಬೆಳಿಗ್ಗೆ ರೂಟ್ ಮಾರ್ಚ್ ನಡೆಸಿದರು.
ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಡಿವೈಎಸ್‍ಪಿ ಛಬ್ಬಿ ಅವರ ನೇತೃತ್ವದಲ್ಲಿ ಪೊಲೀಸ್ ಪಡೆಗಳು ನಗರದ ಬೀದಿಗಳಲ್ಲಿ ರೂಟ್ ಮಾರ್ಚ್ ನಡೆಸಿದವು. ನಗರ ಠಾಣೆ, ಗ್ರಾಮೀಣ ಠಾಣೆ, ಟ್ರಾಫಿಕ್ ಠಾಣೆ ಹಾಗೂ ಡಿಎಆರ್ ಮತ್ತು ವಿಶೇಷ ಪೊಲೀಸ್ ತಂಡದ ಸಿಬ್ಬಂದಿಗಳು ರಕ್ಷಾ ಕವಚಗಳ ಸಹಿತ ರೂಟ್ ಮಾರ್ಚ್ ನಡೆಸಿದರು. ಡಿವೈಎಸ್‍ಪಿ ಅವರೊಂದಿಗೆ ಐದು ಮಂದಿ ಠಾಣಾಧಿಕಾರಿಗಳು, ಇಬ್ಬರು ಸಿವಿಲ್ ವೃತ್ತ ನಿರೀಕ್ಷಕರು ಮತ್ತು ಡಿಎಆರ್ ಇನ್ಸ್‍ಪೆಕ್ಟರ್ ಭಾಗವಹಿಸಿದ್ದರು.