ಶ್ರೀಮಂಗಲ, ನ. 13: ಕೊಡಗಿನ ಜನರ ಭಾವನೆಗೆ ಕವಡೆ ಕಾಸಿನ ಬೆಲೆ ನೀಡದೆ, ಟಿಪ್ಪು ಜಯಂತಿ ಆಚರಿಸಿಯೇ ತೀರುವದಾಗಿ ದುರಹಂಕಾರದಿಂದ ಮೆರೆಯುತ್ತಿದ್ದ ಸರ್ಕಾರದ ದರ್ಪಕ್ಕೆ ಕೋರ್ಟ್ ಮೂಲಕ ಕಡಿವಾಣ ಹಾಕಿರುವದಾಗಿ, ಟಿಪ್ಪು ಜಯಂತಿ ನಿಷೇಧಿಸುವಂತೆ ಕೋರಿ ರಾಜ್ಯ ಉಚ್ಛ ನ್ಯಾಯಾಲಯ ದಲ್ಲಿ ಪಿ.ಐ.ಎಲ್. ಸಲ್ಲಿಸಿದ್ದ, ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆ ಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಗೃಹ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ, ಟಿಪ್ಪು ಜಯಂತಿಯನ್ನು ಕೊಡಗಿನ ಮಟ್ಟಿಗೆ ನಿಷೇಧಿಸುವಂತೆ ಕೇಳಿಕೊಂಡಿದ್ದರೂ ಸರ್ಕಾರದಿಂದ ಯಾವದೇ ಸ್ಪಂದನ ಸಿಗದ ಕಾರಣ, ಶಾಸಕಾಂಗ ಹಾಗೂ ಕಾರ್ಯಾಂಗಗಳೆರಡು ತಮ್ಮ ಮನವಿಗೆ ಸ್ಪಂದಿಸಲು ವಿಫಲವಾದಾಗ ಅನಿವಾರ್ಯವಾಗಿ ನ್ಯಾಯಾಂಗದ ಮೊರೆ ಹೋಗಿದ್ದಾಗಿ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡ ಬಾರದು ಎಂದು ಉಚ್ಛ ನ್ಯಾಯಾ ಲಯದಲ್ಲಿ ವಕೀಲ ಪವನ ಚಂದ್ರ ಶೆಟ್ಟಿ ಅವರ ಮೂಲಕ ಸಲ್ಲಿಸಿದ ರಿಟ್ ಅರ್ಜಿಯನ್ನು ದಾಖಲಿಸಿಕೊಂಡು, ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳಾದ ಜ. ಎ.ಎಸ್. ಬೋಪಣ್ಣ ಅವರ ಏಕ ಸದಸ್ಯ ಪೀಠ ಅರ್ಜಿಯನ್ನು ಪಿ.ಐ.ಎಲ್. ಆಗಿ ಪರಿವರ್ತಿಸಿ ಎರಡನೇ ಅರ್ಜಿಯನ್ನು ವಿಭಾಗೀಯ ಪೀಠದ ಮುಂದೆ ಸಲ್ಲಿಸುವಂತೆ ಸೂಚಿಸಿತ್ತು.

ಆ ಮೇರೆಗೆ ಸಲ್ಲಿಸಿದ ಪಿ.ಐ.ಎಲ್. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯ ಮೂರ್ತಿಗಳಾದ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಟಿಪ್ಪು ಒಬ್ಬ ರಾಜ ಮಾತ್ರ, ಆತ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ. ಆತ ಬ್ರಿಟೀಷರ ವಿರುದ್ಧ ನಡೆಸಿದ ಯುದ್ಧ, ಆತನ ಸಂಸ್ಥಾನ ವಿಸ್ತರಣೆಗಾಗಿ ನಡೆಸಿದ ಹೋರಾಟವೇ ಹೊರತು ಅದು ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಕಲಾಪವನ್ನು ಮುಂದೂಡಿತ್ತು.

ಮರುದಿನ ನಡೆದ ಕಲಾಪದಲ್ಲಿ ವಕೀಲ ಪವನ ಚಂದ್ರ ಶೆಟ್ಟಿ ಅವರೊಂದಿಗೆ ಅರ್ಜಿದಾರರ ಪರವಾಗಿ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಮೇರಿಯಂಡ ಸಜನ್ ಪೂವಯ್ಯ ಅವರು ವಾದ ಮಂಡಿಸಿ, ಜಯಂತಿಯನ್ನು ಆಚರಿಸಲು ಮುಂದಾಗಿರುವದು ಸಂವಿಧಾನದ ಅನುಛ್ಛೇದ 18 ರ ಉಲ್ಲಂಘನೆಯಾಗಲಿದೆ ಎಂದು ವಾದಿಸಿದ್ದರು.

ವಾದ-ವಿವಾದಗಳನ್ನು ಆಲಿಸಿದ ವಿಭಾಗೀಯ ಪೀಠ, ಸಚಿವ ಸಂಪುಟ ತೀರ್ಮಾನವಾಗಿರುವದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸುವದಿಲ್ಲ. ಮತ್ತೊಮ್ಮೆ ಕಾರ್ಯಾಂಗಕ್ಕೆ ಮನವಿ ಸಲ್ಲಿಸುವಂತೆ ತೀರ್ಪು ನೀಡಿತ್ತು.

ನ್ಯಾಯಾಲಯಕ್ಕೆ ಗೌರವ ತೋರಿ ರಾಜ್ಯದ ಮುಖ್ಯ ಕಾರ್ಯದರ್ಶಿ ಯವರಿಗೆ ಮನವಿ ಸಲ್ಲಿಸ ಲಾಯಿತಾದರೂ, ಶಾಸಕಾಂಗವನ್ನು ಮೀರಿ ಕಾರ್ಯಾಂಗ ವ್ಯವಹರಿ ಸುವದಿಲ್ಲ ಎಂಬದು ಗೊತ್ತಿರುವ ಸತ್ಯವೇ ಆಗಿತ್ತು. ಹಾಗೆಯೇ ನಾವು ನೀಡಿದ ಮನವಿಗೆ ಕಾಟಾಚಾರಕ್ಕೆ ಉತ್ತರಿಸುವ ಪ್ರಯತ್ನ ಮಾಡಿದ ಸರ್ಕಾರ, ಕೋರ್ಟ್ ನೀಡಿದ ಅವಧಿಯೊಳಗೆ ಉತ್ತರವನ್ನು ನೀಡದೆ ಕಾನೂನನ್ನು ಊಲ್ಲಂಘಿಸಿತ್ತು. ಇದನ್ನು ಪ್ರಶ್ನಿಸಿ ಮತ್ತೊಂದು ಪಿ.ಐ.ಎಲ್. ಸಲ್ಲಿಸಲಾಯಿತಾದರೂ ಅದನ್ನು ಕೋರ್ಟ್ ಪುರಸ್ಕರಿಸದಿರುವದು, ಅಲ್ಪಸಂಖ್ಯಾತ ಕೊಡವರ ಧ್ವನಿಗೆ ಯಾವದೇ ಬೆಲೆಯಿಲ್ಲ ಎನ್ನುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆದರೂ, ಮೊದಲ ದಿನ ಕೋರ್ಟ್ ಸರ್ಕಾರಕ್ಕೆ ಬೀಸಿದ ಛಾಟಿಯೇಟಿನಿಂದ ತೀವ್ರ ಮುಜುಗರ ಅನುಭವಿಸಿದ ಸರ್ಕಾರ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ಕೊಡಗನ್ನು ಸ್ಮಶಾನದಂತೆ ಪರಿವರ್ತಿಸಿ, ಜಯಂತಿ ಆಚರಿಸುವಂತಾಗಿದ್ದು ಮಾತ್ರ ಸರ್ಕಾರಕ್ಕಾದ ಹಿನ್ನಡೆ ಎಂದು ಅವರು ಅಭಿಪ್ರಾಯ ಪಟ್ಟರು. ಕೊಡಗಿನಿಂದ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಇಷ್ಟೊಂದು ಪೇಚಿಗೆ ಸಿಲುಕಿದ್ದು ಇದೇ ಮೊದಲು. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಈ ನಿಟ್ಟಿನಲ್ಲಿ ನಾವು ನಮ್ಮ ಹೋರಾಟದಲ್ಲಿ ಗೆದ್ದಿರುವದಾಗಿ ಹೇಳಿದ ಅವರು, ಈ ಸಂದರ್ಭ, ಕೊಡಗಿನಾದ್ಯಂತ ಜನತೆ ನೀಡಿದ ಬೆಂಬಲವನ್ನು ಕೃತಜ್ಞತೆ ಯೊಂದಿಗೆ ಸ್ಮರಿಸುವದಾಗಿ ತಿಳಿಸಿದರು.

ಯಾವದೇ ಕಾರಣಕ್ಕೂ ತಮ್ಮ ಹೋರಾಟವನ್ನು ನಿಲ್ಲಿಸುವದಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಕಾರ್ಯತಂತ್ರ ರೂಪಿಸುತ್ತಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ ಉಪಸ್ಥಿತರಿದ್ದರು.