ನಾಪೋಕ್ಲು, ನ. 6 : ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ನೆಲಜಿ ಫಾಮರ್ಸ್ ಡೆವಲಪ್‍ಮೆಂಟ್ ಅಂಡ್ ರಿಕ್ರಿಯೇಷನ್ ಅಸೋಸಿಯೇಶನ್ ಸರ್ಕಾರವನ್ನು ಆಗ್ರಹಿಸಿದೆ. ಕ್ಲಬ್‍ನ ಪದಾಧಿಕಾರಿಗಳು ಲಿಖಿತ ಹೇಳಿಕೆ ನೀಡಿ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ನೆಪವಾಗಿರಿಸಿ ಕೊಂಡು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ, ಕೋಮು ಭಾವನೆ ಕೆರಳಿಸಿ, ಅನ್ಯೋನ್ಯವಾಗಿದ್ದ ಜನಾಂಗಗಳ ನಡುವೆ ವೈಷಮ್ಯ ಹುಟ್ಟುಹಾಕಿದೆ ಎಂದು ಟೀಕಿಸಿದ್ದಾರೆ. ಹಿಂದೂ ವಿರೋಧಿಯಾಗಿದ್ದ ಟಿಪ್ಪು ಕೊಡಗಿನಲ್ಲಿ ಹಲವಾರು ಹಿಂದೂ ದೇವಾಲಯಗಳನ್ನು ಲೂಟಿ ಮಾಡಿ ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ಸಂದರ್ಭ ಉಂಟಾದ ಮಡಿಕೇರಿ ಗಲಭೆಯಲ್ಲಿ ಅಮಾಯಕ ರಾದ ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ ಅವರ ಹತ್ಯೆ ಮಾಡಲಾಗಿತ್ತು.
ಪರಿಣಾಮವಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ನಂತರ ದುಷ್ಕರ್ಮಿಗಳು ಪೇರೂರು ಗ್ರಾಮದ ಯುವಕ ಕೃಪನ್ ಕಾಳಪ್ಪ ಅವರ ಹತ್ಯೆಗೋಸ್ಕರ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಳೆದ 300-400 ವರ್ಷಗಳಿಂದ ಇಲ್ಲದಂತಹ ಆಚರಣೆ ಯನ್ನು ಸರ್ಕಾರ ಕೈಗೆತ್ತಿಕೊಂಡು ಜಿಲ್ಲೆಯಲ್ಲಿ ಅಮಾಯಕರ ಸಾವಿಗೆ ಕಾರಣರಾಗಿದೆ. ರಾಜಕೀಯ ದುರುದ್ದೇಶದಿಂದ ಸರ್ಕಾರ ಈ ಆಚರಣೆಗೆ ಮುಂದಾಗಿದ್ದು ಈಗಲಾದರೂ ನಿರ್ಧಾರವನ್ನು ಬದಲಾಯಿಸಿದಲ್ಲಿ ಜಿಲ್ಲೆಯಲ್ಲಿ ಜನತೆ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬಹುದಾಗಿದೆ. ಬದಲಾಗಿ ಟಿಪ್ಪು ಜಯಂತಿ ಆಚರಿಸಿ ಕೊಡಗಿನಲ್ಲಿ ಅಶಾಂತಿ ಗಲಭೆಗಳು ಉಂಟಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ಶಾಂತಿ, ಸಂಸ್ಕøತಿ, ಸಹಬಾಳ್ವೆಗೆ ಹೆಸರಾದ ಕೊಡಗಿನಲ್ಲಿ ಇಂತಹ ಅನಾವಶ್ಯಕ ದುಷ್ಪರಿಣಾಮ ಬೀರುವಂತಹ ಆಚರಣೆಗಳ ಬದಲಾಗಿ ಜಿಲ್ಲೆಯ ಹಲವಾರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ ಸಮಗ್ರ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸಲಿ ಎಂದು ನೆಲಜಿ ಫಾರ್ಮರ್ಸ್ ಕ್ಲಬ್ ಆಗ್ರಹಿಸಿದೆ.