ಮಡಿಕೇರಿ, ನ. 2: ಉದ್ದೇಶಿತ ಟಿಪ್ಪು ಜಯಂತಿಯನ್ನು ಕೊಡಗಿನಲ್ಲಿ ಆಚರಿಸಬಾರದೆಂದು ಆಗ್ರಹಿಸಿ ಅಮ್ಮತ್ತಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಕಾರ್ಮಾಡು, ಅಮ್ಮತ್ತಿ, ಹೊಸೂರು, ಬಿಳುಗುಂದ ವ್ಯಾಪ್ತಿಯ ಹಿಂದೂಪರ ಸಂಘಟನೆಗಳು, ಕೊಡವ ಸಮಾಜ, ವಿಎಸ್ಎಸ್ಎನ್, ಎಪಿಸಿಎಂಎಸ್, ಚೇಂಬರ್ ಆಫ್ ಕಾಮರ್ಸ್, ಮಹಿಳಾ ಸಮಾಜ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಮ್ಮತ್ತಿ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಸ್ಥಳೀಯ ಕಂದಾಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರು, ಸರಕಾರ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಕೈ ಬಿಡಬೇಕು. ಎಲರೂ ಇದನ್ನು ವಿರೋಧಿಸುತ್ತಿದ್ದು, ಇದರ ನಡುವೆಯೂ ಸರಕಾರ ಆಚರಣೆಗೆ ಮುಂದಾದರೆ ಅದರ ಪರಿಣಾಮ ಉತ್ತಮವಾಗಿರುವದಿಲ್ಲ. ಆ ದಿನ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಆರ್ಎಸ್ಎಸ್ ಪ್ರಮುಖ ಐನಂಡ ಜಪ್ಪು ಅಚ್ಚಪ್ಪ ಅವರು ಮಾತನಾಡಿ, ಟಿಪ್ಪುವಿನಿಂದ ಆಗಿರುವ ದೌರ್ಜನ್ಯದ ಕುರಿತು ಪ್ರಸ್ತಾಪಿಸಿದರು. ಪ್ರತಿಭಟನೆಯಲ್ಲಿ ಹಿಂ.ಜಾ.ವೇ. ಯ ಐನಂಡ ಲಾಲಾ ಅಯ್ಯಣ್ಣ, ಕುಟ್ಟಂಡ ಪ್ರಿನ್ಸ್, ಕುಟ್ಟಂಡ ಮಿಲನ್, ಉದ್ದಪಂಡ ಜಗತ್, ವೀರಾಜಪೇಟೆ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ವಿಎಸ್ಎಸ್ಎನ್ ಅಧ್ಯಕ್ಷ ಮೂಕೋಂಡ ರಘು, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮೊಳ್ಳೆರ ರತ್ನ, ವಕೀಲರಾದ ನೆಲ್ಲಮಕ್ಕಡ ಸುಮನ್, ಮಾಚಿಮಂಡ ಸುರೇಶ್ ಅಯ್ಯಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ನೆಲ್ಲಮಕ್ಕಡ ರತಿ, ಕಾರ್ಮಾಡು ಗ್ರಾ.ಪಂ. ಅಧ್ಯಕ್ಷೆ ರೋನಾ ಭೀಮಯ್ಯ, ಅಮ್ಮತ್ತಿ ಗ್ರಾ.ಪಂ. ಅಧ್ಯಕ್ಷೆ ಟವಿ ನಾಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.