ಮಡಿಕೇರಿ, ಅ. 24: ಶಾಂತಿಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಾಮರಸ್ಯ ಹದಗೆಡುತ್ತಿದ್ದು, ಟಿಪ್ಪು ಜಯಂತಿಯಿಂದ ಮತ್ತಷ್ಟು ಅಶಾಂತಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯನ್ನು ನಿಷೇಧಿಸುವಂತೆ ಮಕ್ಕಂದೂರು ಕೊಡವ ಸಮಾಜ ಆಗ್ರಹಿಸಿದೆ.

ಮಕ್ಕಂದೂರು ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಇತರ ಪದಾಧಿಕಾರಿಗಳು ಲಿಖಿತ ಹೇಳಿಕೆ ನೀಡಿ, ಕೊಡಗು ಜಿಲ್ಲೆ ಹಿಂದಿನಿಂದಲೂ ಶಾಂತಿಗೆ ಹೆಸರಾದ ಜಿಲ್ಲೆಯಾಗಿದೆ. ಇಲ್ಲಿನ ಜನತೆ ಅತ್ಯಂತ ಉತ್ತಮ ಆತಿಥ್ಯವನ್ನು ನೀಡುವವರು. ಜಿಲ್ಲೆಯ ಹಳ್ಳಿಗಳಲ್ಲಿ ಜನರು ಇಂದಿಗೂ ಯಾವದೇ ಜಾತಿ ಬೇಧವಿಲ್ಲದೆ ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬರೂ ಯಾವದೇ ಕೋಮು ಭಾವನೆ ಇಲ್ಲದೆ ಕಷ್ಟ ಸುಖದಲ್ಲಿ ಭಾಗಿಗಳಾಗುತ್ತಾರೆ. ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಆದರೆ ಕೊಡಗಿನ ಜನರ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಅದನ್ನು ಸಹಿಸುವವರಲ್ಲ. ಈಗ ಟಿಪ್ಪು ಜಯಂತಿಯನ್ನು ಇದಕ್ಕಾಗಿಯೇ ವಿರೋಧಿಸಲಾಗುತ್ತಿದೆ. ಈ ಹಿಂದೆ ಟಿಪ್ಪು ಕೊಡಗಿನ ಮೇಲೆ ಆಕ್ರಮಣ ಮಾಡಿದ್ದು, ಸೋತು ಹಿಂದಿರುಗಿರುತ್ತಾನೆ. ಇದಕ್ಕೆ ಅವಮಾನಿತನಾಗಿ ಟಿಪ್ಪು ಕೊಡಗಿನವರನ್ನು ಎದುರಿಸಲಾಗದೆ, ಮೋಸದಿಂದ ಸೌಹಾರ್ದ ಕೂಟ ನಡೆಸುವ ನಾಟಕವಾಗಿ ದೇವಟುಪರಂಬು ಮೈದಾನದಲ್ಲಿ ಎಲ್ಲರನ್ನೂ ಶಸ್ತ್ರ ರಹಿತವಾಗಿ ಬರುವಂತೆ ಹೇಳಿ, ಎಲ್ಲರೂ ಬಂದ ನಂತರ ಟಿಪ್ಪುವಿನ ಸೈನ್ಯ ಸುತ್ತುವರಿದು ಮಹಿಳೆಯರು, ಮಕ್ಕಳು ಎಂದು ನೋಡದೆ ಇದನ್ನು ಪ್ರತಿಭಟಿಸಿದವರ ಮೇಲೆ ಆಕ್ರಮಣ ಮಾಡಿ ಹತ್ಯೆಗೈಯಲಾಗಿದೆ. ಉಳಿದವರನ್ನು ಮೈಸೂರಿನ ಶ್ರೀರಂಗಪಟ್ಟಣದ ಜೈಲಿಗೆ ಹಾಕಿ ಹಿಂಸಿಸಲಾಗಿದೆ. ಅನೇಕರನ್ನು ಮತಾಂತರ ಮಾಡಲಾಗಿದೆ. ಇವರೇ ಇಂದು ಕೊಡಗಿನ ಅನೇಕ ಕಡೆ ಇರುವ ಕೊಡವ ಮುಸ್ಲಿಮರು. ಇದು ಎಲ್ಲರ ಕಣ್ಣಮುಂದೆ ಇರುವ, ಕಾಣುವ ಸತ್ಯವಾಗಿದ್ದು, ಈ ರೀತಿ ಹಿಂಸೆ, ಕ್ರೂರತನಕ್ಕೆ ಬಲಿಯಾದವರು ನಮ್ಮ ಹಿರಿಯರು, ಸಂಬಂಧಿಕರು, ಪೂರ್ವಿಕರು. ಈ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಲಾಗುತ್ತಿದೆ. ಸರ್ಕಾರದ ಜವಾಬ್ದಾರಿ ಯಾವಾಗಲೂ ಶಾಂತಿ ಕಾಪಾಡುವದು, ಬಹುಸಂಖ್ಯಾತ ಜನರ ಭಾವನೆಗಳಿಗೆ ಸ್ಪಂದಿಸುವದು ಸರ್ಕಾರದ ಜವಾಬ್ದಾರಿಯಾಗಿದೆ. ಇಲ್ಲಿನ ವಾಸ್ತವಾಂಶವನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಮಾಡಿ ಟಿಪ್ಪು ಜಯಂತಿಯನ್ನು ನಿಷೇಧಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಟಿಪ್ಪುವನ್ನು ಬಿಟ್ಟು ಸಮಾಜಕ್ಕೆ ಕೊಡುಗೆ ನೀಡಿದಂತಹ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ, ಪಂಚಾಯತ್ ರಾಜ್‍ನ ನಜೀರ್ ಸಾಬ್‍ನಂತಹ ಜಯಂತಿ ಆಚರಿಸಲು ಸರ್ಕಾರ ಮುಂದಾಗಲಿ ಎಂಬದು ಕೊಡವ ಸಮಾಜದ ಆಗ್ರಹವಾಗಿದೆ.

ಸರ್ಕಾರವೇ ಮತ್ತೊಮ್ಮೆ ತಪ್ಪು ನಿರ್ಧಾರ ತೆಗೆದುಕೊಂಡು ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಜಿಲ್ಲೆಯ ಮಟ್ಟಿಗೆ ಇದನ್ನು ಹಿಂದಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಜನತೆ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಲು ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಲಾಗಿದೆ.

ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳದೆ ಹಠಸಾಧಿಸಲು ಮುಂದಾದರೆ ಇದರಿಂದ ಎದುರಾಗುವ ಸಮಸ್ಯೆಗಳಿಗೆ ಸರ್ಕಾರವೇ ನೇರವಾಗಿ ಹೊಣೆಯನ್ನು ಹೊರಬೇಕು. ಸಮಾಜವು ಟಿಪ್ಪು ಜಯಂತಿ ಆಚರಣೆಯನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಕೊಡವ ಸಮಾಜ ಲಿಖಿತವಾಗಿ ತಿಳಿಸಿದೆ.