ಮಡಿಕೇರಿ, ಡಿ. 4: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ಅಖಿಲ್ ಕುಟ್ಟಪ್ಪ ಹಾಗೂ ಅಶ್ವತ್ಥ್ ಅಯ್ಯಪ್ಪ ಸ್ಮರಣಾರ್ಥ ಅಂತರ ಪ್ರೌಢಶಾಲಾ ವಿಭಾಗದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಜನರಲ್ ತಿಮ್ಮಯ್ಯ ಶಾಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲಾ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿ ಜ. ತಮ್ಮಯ್ಯ ಶಾಲಾ ತಂಡ 25 ಓವರ್‍ಗೆ 124 ರನ್ ಗಳಿಸಿ ಆಲೌಟ್ ಆಯಿತು. ಉತ್ತರವಾಗಿ ಆಡಿದ ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲಾ ತಂಡ 87 ರನ್ ಗಳಿಸಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಸೋಲನುಭವಿಸಿತು.ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜ. ತಿಮ್ಮಯ್ಯ ಶಾಲಾ ತಂಡದ ವಿವನ್ ಪಡೆದರೆ, ಅಂತಿಮ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಜ. ತಿಮ್ಮಯ್ಯ ಶಾಲೆಯ ಚರಣ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದ ಅತಿಥಿಯಾಗಿ ಬಿವಿಕೆವಿಯ ಅಧ್ಯಕ್ಷರಾದ ಜ್ಯಾಕ್ ಸುಬ್ಬಯ್ಯ ಆಗಮಿಸಿದ್ದರು. ಚೌರೀರ ರವಿ ಬಹುಮಾನ ವಿತರಿಸಿದರು.