ಮಡಿಕೇರಿ, ಜ. 6: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ ಅಗತ್ಯವಾಗಿ ಇರಬೇಕು. ಆಗ ಮಾತ್ರ ಜ್ಞಾನಿಗಳಾಗಲು ಸಾಧ್ಯ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪ ನಂದಾಜಿ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಆಂತರ್ಯದಲ್ಲಿ ದೈವತ್ವ ವಿರುತ್ತದೆ. ಅದೇ ಧರ್ಮ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಆ ದೈವತ್ವದ ಶಕ್ತಿವನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ವಿದಾರ್ಥಿ ದೆಸೆಯಲ್ಲೇ ಛಲ, ಇಚ್ಛಾಶಕ್ತಿಯಿಂದ ಮುನ್ನುಗ್ಗಬೇಕು. ಜೀವನದ ಸಾರ್ಥಕತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ಗಳನ್ನು ನುಡಿದರು.
ನಂತರ 2015-16ರ ಸಾಲಿನಲ್ಲಿ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನದ ಹಲವು ಮಾದರಿಗಳಿದ್ದ ವೈಜ್ಞಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂದರ್ಭ ಬಿ.ಎಂ. ಪೂವಪ್ಪ, ಪದವಿ ಕಾಲೇಜು ಪ್ರಾಂಶುಪಾಲೆ ಚಿತ್ರಾ, ಕಾಲೇಜಿನ ನಾಯಕ - ನಾಯಕಿ ಪೂವಣ್ಣ, ಹರ್ಷಿತಾ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ರಂಜಿತ ಪ್ರಾರ್ಥಿಸಿ, ಬಿ.ಎಂ. ಬೆಳ್ಯಪ್ಪ ಸ್ವಾಗಿತಿಸಿ, ಉಪನ್ಯಾಸಕ ನಂದೀಶ್ ನಿರೂಪಿಸಿ, ವಂದಿಸಿದರು.