ವೀರಾಜಪೇಟೆ, ಜು. 10: ಜೀವನದಲ್ಲಿನ ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ಬೆಳಗಿಸಲು ಗುರುವಿನಿಂದ ಸಾಧ್ಯ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಭೀತಿ ಹರಾನಂದ ಸ್ವಾಮೀಜಿ ಹೇಳಿದರು.
ಪಾಲಿಬೆಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ವತಿಯಿಂದ ಈಚೆಗೆ ನಡೆದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಾತೃ, ಪಿತೃ, ಆಚಾರ್ಯ ಹಾಗೂ ಅತಿಥಿ ದೇವೋಭವ ಎನ್ನುವ ನಾಲ್ಕು ಅಂಶಗಳನ್ನು ಜೀವನದಲ್ಲಿ ಎಲ್ಲರೂ ಪಾಲಿಸಬೇಕು. ನಮ್ಮನ್ನು ನಾವು ಮೊದಲು ಗೌರವಿಸುವದನ್ನು ಕಲಿತರೆ, ಇತರರನ್ನು ನಾವು ಸುಲಭವಾಗಿ ಗೌರವಿಸಬಹುದು. ಇಂತಹ ಗುಣಗಳನ್ನು ಅಳವಡಿಕೊಳ್ಳುವದರಿಂದ ಬಲಿಷ್ಠ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಪರ ಹಿತಾನಂದ ಸ್ವಾಮೀಜಿ ಹಾಗೂ ಭೀತಿ ಹರಾನಂದ ಸ್ವಾಮೀಜಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಎನ್‍ಎಸ್‍ಎಸ್ ಘಟಕ ಈ ಹಿಂದೆ ಸಲ್ಲಿಸಿದ ಮನವಿಯ ಮೇರೆಗೆ ಆಶ್ರಮದ ವತಿಯಿಂದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಪುಸ್ತಕ ಹಾಗೂ ವಸ್ತ್ರಗಳನ್ನು ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪುಲಿಯಂಡ ಬೋಪಣ್ಣ ವಹಿಸಿದ್ದರು. ಕೌಶಲ್ಯ ಹಾಗೂ ತಂಡದವರು ಪ್ರಾರ್ಥಿಸಿದರು. ಕಾಲೇಜಿನ ಪಾಂ್ರಶುಪಾಲೆ ಡಾ. ಕೆ. ಭವಾನಿ ಸ್ವಾಗತಿಸಿದರು. ಉಪನ್ಯಾಸಕಿ ಸೌಮ್ಯ ವಂದಿಸಿದರು.