ವೀರಾಜಪೇಟೆ, ಅ. 14: ಸಮಾಜ ಕಲ್ಯಾಣಕ್ಕಾಗಿ ದುಡಿಮೆ, ಶುಚಿತ್ವ ಮಹತ್ವದ ಅರಿವನ್ನು ಸಾರುವ ಕೆಲಸ, ಸ್ವಯಂ ಪ್ರೇರಿತವಾಗಿ ಶುಚಿಗೊಳಿಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸಮಾಜ ಸೇವೆಯ ಮೂಲಕ ಆಗಬೇಕಾಗಿದೆ. ಜ್ಞಾನದಂತ ಸಂಪತ್ತಿಲ್ಲ, ಅಜ್ಞಾನದಂತ ಬಡತನವಿಲ್ಲ ಎಂಬದು ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಮನವರಿಕೆ ಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯೆಯೊಂದಿಗೆ ಸಮಾಜ ಸೇವೆಯಲ್ಲಿತೊಡಗಿಸಿ ಕೊಳ್ಳುವಂತಾಗಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಮಾಜ ಸೇವಕರು ಆದ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.

ವೀರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಅಂಗವಾಗಿ ಹೆಗ್ಗಳದ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ದಿನದ ದೈನಂದಿನ ಶೈಕ್ಷಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಕೇತ್ ಪೂವಯ್ಯ ಅವರು ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಯಿಂದ ಸಮಾಜ ಸೇವೆಯಲ್ಲಿ ತೊಡಗಬೇಕು. ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ಸೇವಾ ಯೋಜನೆಗಾಗಿ ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದ ನಂತರ 1958ರಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಅವರು ಯೋಜನೆಯನ್ನು ಕಾರ್ಯರೂಪಕ್ಕೆ ತಂದು ರಾಷ್ಟ್ರದ 37 ವಿಶ್ವ ವಿದ್ಯಾಲಯಗಳಲ್ಲಿ ಪ್ರಥಮವಾಗಿ ಯೋಜನೆ ಕಾರ್ಯಗತಗೊಳಿಸಿದರು ಎಂದು ಅವರು ನೆನಪಿಸಿದರು.

ಕೋತೂರು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಭವಿಷ್ಯದಲ್ಲಿ ರಾಷ್ಟ್ರದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.

ಅತಿಥಿಯಾಗಿ ಭಾಗವಹಿಸಿದ್ದ ಬೇಟೋಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಅವರು ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅತಿಥಿಗಳಾಗಿ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯೆ ಟಿ.ಕೆ.ಲೀಲಾವತಿ, ಸದಸ್ಯ ಬೋಪಣ್ಣ, ಕಾಲೇಜಿನ ಉಪನ್ಯಾಸಕರುಗಳಾದ ತಿಮ್ಮಯ್ಯ, ನವ್ಯ, ಎಂ.ಜೆ.ಪ್ರಮೀಳ, ದಿನೇಶ್, ಸೋಮಣ್ಣ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವೀರಾಜಪೇಟೆ ಮಲೆ ಮಹದೇಶ್ವರ ಬೆಟ್ಟದ ಶನೀಶ್ವರ ದೇವಾಲಯದ ಪ್ರಧಾನ ಅರ್ಚಕ ಯುವರಾಜ್ ಕೃಷ್ಣ "ಪರಿಸರ ಮತ್ತು ಸಂಪ್ರದಾಯದ ಕುರಿತು ಮಾತನಾಡಿದರು. ಉಪನ್ಯಾಸಕ ದಿನೇಶ್ ಸ್ವಾಗತಿಸಿದರು. ಶಿಬಿರಾರ್ಥಿ ಗಿರೀಶ್ ವಂದಿಸಿದರು. ಎನ್.ಎಸ್.ಎಸ್. ಶಿಬಿರದ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಸಂಕೇತ್ ಪೂವಯ್ಯ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.