ಸೋಮವಾರಪೇಟೆ, ಅ. 26: ಜಾತ್ಯತೀತ ಜನತಾ ದಳಕ್ಕೆ ನೂತನ ಜಿಲ್ಲಾ ಅಧ್ಯಕ್ಷರನ್ನಾಗಿ ವೀರಾಜಪೇಟೆಯ ಸಂಕೇತ್ ಪೂವಯ್ಯ ಅವರನ್ನು ನೇಮಕಗೊಳಿಸಿರುವ ರಾಜ್ಯ ವರಿಷ್ಠರ ಕ್ರಮಕ್ಕೆ ಸೋಮವಾರಪೇಟೆಯ ಜೆಡಿಎಸ್ ಪಕ್ಷದ ಕೆಲ ಮುಖಂಡರು ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ.ನಿನ್ನೆ ದಿನ ಜೆಡಿಎಸ್ ಮುಖಂಡ ಹಾಗೂ ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಉಪಸ್ಥಿತಿಯಲ್ಲಿ ನಗರದಲ್ಲಿರುವ ಜಾತ್ಯತೀತ ಜನತಾ ದಳ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆದಿದ್ದು, ಸ್ಥಳೀಯ ಮುಖಂಡರ ಗಮನಕ್ಕೆ ತಾರದೇ ಜಿಲ್ಲಾಧ್ಯಕ್ಷರನ್ನು ಏಕಾಏಕಿ ಬದಲಾವಣೆ ಮಾಡಿರುವ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

ಕಳೆದ ವಿಧಾನ ಸಭಾ ಚುನಾವಣೆಯ ನಂತರ ನಡೆದ ವಿದ್ಯಮಾನದಲ್ಲಿ ವಿ.ಪಿ. ಶಶಿಧರ್ ಅವರು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭವೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್ ಪೂವಯ್ಯ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು.

ಈ ಬಗ್ಗೆ ಕೆಲ ಸುತ್ತಿನ ಮಾತುಕತೆಗಳೂ ನಡೆದು, ಸಂಕೇತ್ ಪೂವಯ್ಯ ಅವರು ಪಕ್ಷದ ರಾಜ್ಯ ವರಿಷ್ಠರ ಸಂಪರ್ಕ ಸಾಧಿಸುತ್ತಿದ್ದ ಸಂದರ್ಭ ದಿಢೀರ್ ಎದ್ದುನಿಂತ ಈ ಭಾಗದ ಜೆಡಿಎಸ್ ಮುಖಂಡರು ಬಸ್‍ಗಳಲ್ಲಿ ಬೆಂಗಳೂರಿಗೆ ತೆರಳಿ ಎಸ್.ಬಿ. ಭರತ್‍ಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಸ್ವಂತ ವರ್ಚಸ್ಸು ಹಾಗೂ ಜೆಡಿಎಸ್ ಬೆಂಬಲಿಗರು ಜಿಲ್ಲೆಯ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಸೋಮವಾರಪೇಟೆ ತಾಲೂಕಿಗೆ ಅಧ್ಯಕ್ಷ ಸ್ಥಾನ ನೀಡಿ, ವೀರಾಜಪೇಟೆಯ ಸಂಕೇತ್ ಪೂವಯ್ಯ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು.

ನೂತನ ಜಿಲ್ಲಾಧ್ಯಕ್ಷರ ನೇಮಕದ ನಂತರವೂ ಜೆಡಿಎಸ್‍ನಲ್ಲಿ ಅಂತಹ ಬದಲಾವಣೆ ಕಾಣಲಿಲ್ಲ. ಪಕ್ಷದ ಸಂಘಟನೆಯಂತೂ ನಿಂತ ನೀರಾಗಿದ್ದು, ಯಾವದೇ ರಚನಾತ್ಮಕ ಕಾರ್ಯಕ್ರಮಗಳು ನಡೆಯಲೇ ಇಲ್ಲ. ಈ ಮಧ್ಯೆ ಎದುರಾದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಭರತ್‍ಕುಮಾರ್ ಅವರೇ ಹಾನಗಲ್ಲು ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದರು.

ಗೆಲುವಿನ ಭಾರೀ ನಿರೀಕ್ಷೆಯಲ್ಲಿದ್ದ ಭರತ್‍ಕುಮಾರ್ ಅವರಿಗೆ ಅನಿರೀಕ್ಷಿತ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚುನಾವಣಾ ಫಲಿತಾಂಶದ ನಂತರವಂತೂ ರಾಜಕೀಯವಾಗಿ ಭರತ್ ತಟಸ್ಥರಾಗಿಯೇ ಉಳಿಯಲಾರಂಭಿಸಿದರು. ಪಕ್ಷದ ಕಾರ್ಯಕರ್ತರೂ ಉತ್ಸಾಹ ಕಳೆದುಕೊಂಡರು.

ಈ ನಡುವೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಟಿಕೇಟ್ ಗಿಟ್ಟಿಸಿಕೊಂಡ ಸಂಕೇತ್ ಪೂವಯ್ಯ ಅವರು ಜಿಲ್ಲೆಯಾದ್ಯಂತ ಸಂಚರಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ಚುನಾವಣೆಯಲ್ಲಿ ಸೋಲನುಭವಿಸಿದರೂ ಪಕ್ಷದ ಕಾರ್ಯಕರ್ತರಾಗಿ, ಮುಖಂಡರಾಗಿಯೇ ಮುಂದುವರೆದರು. ಕಾರ್ಯಕರ್ತರ ನೋವು ನಲಿವಿಗೆ ಸ್ಪಂದಿಸುತ್ತಾ, ಇನ್ನಿತರ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಬೆರೆಯಲಾರಂಭಿಸಿದರು.

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಕುಮಾರಸ್ವಾಮಿ ಅವರ ಗಮನ ಸೆಳೆದು ಕುಟುಂಬಕ್ಕೆ ನ್ಯಾಯ ದೊರಕಿಸಲು ಅವಿರತ ಹೋರಾಟ ನಡೆಸಿದರು. ಜೆಡಿಎಸ್ ಬ್ಯಾನರ್ ಅಡಿಯಲ್ಲಿಯೇ ಪ್ರತಿಯೊಂದು ಕಾರ್ಯವನ್ನೂ ಮಾಡುತ್ತಿದ್ದ ಸಂಕೇತ್ ಪೂವಯ್ಯ ಅವರ ರಾಜಕೀಯ ಚಟುವಟಿಕೆ, ಸಂಘಟನಾ ಚಾತುರ್ಯಕ್ಕಾಗಿ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರು. ಇವಿಷ್ಟು ಇಲ್ಲಿಯವರೆಗೆ ನಡೆದಿರುವ ರಾಜಕೀಯ ಘಟನಾವಳಿ.

ಕಳೆದ ಕೆಲ ತಿಂಗಳವರೆಗೂ ಯಾವದೇ ರಾಜಕೀಯ ಕಾರ್ಯಚಟುವಟಿಕೆ, ಸಭೆ ಸಮಾರಂಭಗಳನ್ನು ನಡೆಸದ ಈ ಭಾಗದ ಜೆಡಿಎಸ್ ಮುಖಂಡರು, ಸಂಕೇತ್ ಪೂವಯ್ಯ ಅವರು ಅಧ್ಯಕ್ಷರಾಗುತ್ತಿದ್ದಂತೆ ದಿಢೀರ್ ಸಭೆ ನಡೆಸಿದ್ದು, ನಮ್ಮ ಗಮನಕ್ಕೆ ತಾರದೇ ಆಯ್ಕೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಭೆಯಲ್ಲಿ ಭಾರೀ ಮಾತುಕತೆ ನಡೆದಿದ್ದು, ಕನಿಷ್ಟ ಪಕ್ಷ ಜೀವಿಜಯ ಮತ್ತು ಎಸ್.ಬಿ. ಭರತ್‍ಕುಮಾರ್ ಅವರ ಗಮನಕ್ಕಾದರೂ ಈ ವಿಚಾರವನ್ನು ತರಬಹುದಿತ್ತು. ಈ ಭಾಗದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಗಳು ವ್ಯಕ್ತವಾದವು ಎನ್ನಲಾಗಿದೆ.

ಅಂತಿಮವಾಗಿ ಮುಂದಿನ ಒಂದೂವರೆ ವರ್ಷದಲ್ಲೇ ಚುನಾವಣೆ ಎದುರಾಗಲಿದ್ದು, ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಮುಖಂಡರು ಮುಂದಾಗಬೇಕು. ನಮ್ಮೊಳಗಿನ ಗೊಂದಲಗಳನ್ನು ಬಹಿರಂಗಪಡಿಸದೇ, ನಮ್ಮಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ.

ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಮಾಜೀ ಸಚಿವ ಬಿ.ಎ. ಜೀವಿಜಯ ಅವರ ನೇತೃತ್ವದಲ್ಲೇ ಎದುರಿಸಲು ಬಹುತೇಕ ಮುಖಂಡರು ನಿರ್ಧರಿಸಿದ್ದು, ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಜೀವಿಜಯ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೋರ್ವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಸಭೆಯಲ್ಲಿ ಜೆಡಿಎಸ್ ಮುಖಂಡರುಗಳಾದ ವಿ.ಎಂ. ವಿಜಯ, ಸುರೇಶ್, ಕೃಷ್ಣಪ್ಪ, ಹೆಚ್.ಬಿ. ಜಯಮ್ಮ, ಶಿವಪ್ಪ, ರಾಜೇಶ್, ಆದಿಲ್ ಪಾಷಾ, ಬೋಜಪ್ಪ, ಜಲಾ ಹೂವಯ್ಯ, ಜಾನಕಿ ವೆಂಕಟೇಶ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು ಎನ್ನಲಾಗಿದೆ.

ಜಿಲ್ಲೆಯ ಮಟ್ಟಿಗೆ ಅತೀ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಗೂ ಮತದಾರರನ್ನು ಹೊಂದಿರುವ ಸೋಮವಾರಪೇಟೆ ತಾಲೂಕಿನ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ತೆನೆಹೊತ್ತ ಮಹಿಳೆಯನ್ನು ಮುನ್ನಡೆಸುವ ಜವಾಬ್ದಾರಿ ಇದೀಗ ಸಂಕೇತ್ ಪೂವಯ್ಯ ಅವರ ಹೆಗಲೇರಿದೆ.

ಪಕ್ಷದೊಳಗಿನ ಗೊಂದಲಗಳನ್ನು ಬಗೆಹರಿಸಿಕೊಂಡು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಸವಾಲು ಸಂಕೇತ್ ಪೂವಯ್ಯ ಅವರ ಎದುರಿದೆ. ಸಂಘಟನಾ ಚಾತುರ್ಯ ಹೊಂದಿರುವ ಸಂಕೇತ್ ಅವರು ಈ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬ ಆಧಾರದ ಮೇಲೆ ಕೊಡಗಿನಲ್ಲಿ ತೆನೆಹೊತ್ತ ಮಹಿಳೆಯ ಭವಿಷ್ಯ ನಿಂತಿದೆ.

- ವಿಜಯ್ ಹಾನಗಲ್