ಸಿದ್ದಾಪುರ, ಡಿ. 31: ಮುಂದಿನ ಒಂದು ವಾರದೊಳಗೆ ಅರಣ್ಯ ಸಚಿವ ರಮಾನಾಥ್ ರೈ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಕಾಡಾನೆ ಹಾಗೂ ಮಾನವ ಸಂಘರ್ಷವನ್ನು ವೈಜ್ಞಾನಿಕವಾಗಿ ತಡೆಹಿಡಿದು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು ತಪ್ಪಿದಲ್ಲಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದೆಂದು ಜಿಲ್ಲಾ ಜಾತ್ಯತೀತ ಜನತಾದಳದ ಪಕ್ಷದ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಎಚ್ಚರಿಕೆ ನೀಡಿದ್ದಾರೆ.
ಮಾಲ್ದಾರೆ ಸಮೀಪದ ಬಾಡಾಗ-ಬಾಣಂಗಾಲ ಗ್ರಾಮದ ಮೈಲಾತ್ ಪುರಾದ ನಿವಾಸಿ ಚೇಲುವ ಎಂಬವರು ಡಿ. 29 ರಂದು ವಡ್ಡರ ಕಾಡು ಕಾಫಿ ತೋಟದ ಒಳಗೆ ಕಾಡಾನೆ ಧಾಳಿಗೆ ಸಿಲುಕಿ ಮೃತ ಪಟ್ಟಿದ್ದರು. ಮೃತರ ಮನೆಗೆ ಭೇಟಿ ನೀಡಿದ ಸಂಕೇತ್ ಪೂವಯ್ಯ ಅವರು ವೈಯಕ್ತಿಕ ರೂ. 10,000 ನಗದನ್ನು ಕುಟುಂಬಸ್ಥರಿಗೆ ನೀಡಿದ ಬಳಿಕ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯನ್ನು ಅನಾಥವಾಗಿಸಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ 26 ಮಂದಿ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದು, ಈವರೆಗೂ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡದೆ ನಿರ್ಲಕ್ಯ ವಹಿಸಿರುವದು ಖಂಡನೀಯ ಎಂದರು.
ಅರಣ್ಯ ಇಲಾಖೆಯು ವೈಜ್ಞಾನಿಕವಾಗಿ ಕಂದಕ ನಿರ್ಮಾಣ ಹಾಗೂ ಬೇಲಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ಇದಲ್ಲದೆ ಇಲಾಖೆಯು ಅನಗತ್ಯವಾಗಿ ಕಿತ್ತಲೆ ಗಿಡಗಳನ್ನು ನೆಡುತ್ತಿದ್ದು, ಇದರ ಬದಲು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ರೂ. 10 ಲಕ್ಷ ಪರಿಹಾರ ಹಣವನ್ನು ನೀಡಬೇಕೆಂದು ಒತ್ತಾಯಿಸಿದರು.
ನೂರಾರು ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಕೃಷಿಕರಿಗೆ ಕೊಟ್ಯಾಂತರ ರೂಪಾಯಿ ನಷ್ಟ ಸಂಭವಿಸುತ್ತಿದೆ. ಕಳೆದ ತಿಂಗಳು ಅರುಳ್ ಜೋಸೆಫ್ ಎಂಬವರು ಬೈಕ್ನಲ್ಲಿ ತೆರಳುವ ಸಂದರ್ಭ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿದ್ದು, ಇತ್ತೀಚೆಗೆ ಚೆಲುವ ಎಂಬವರು ಮೃತಪಟ್ಟಿದ್ದು, ಮೃತ ವ್ಯಕ್ತಿಗೆ 2 ಮಕ್ಕಳಿದ್ದು, ಇವರಿಗೆ ಸರಕಾರಿ ಉದ್ಯೋಗವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾಡಾನೆ-ಮಾನವ ಸಂಘರ್ಷ ತಡೆ ಹಿಡಿಯಲು ಸ್ಥಳೀಯ ವ್ಯಕ್ತಿಗಳನ್ನು ಅರಣ್ಯ ಇಲಾಖೆ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಪಕ್ಷದ ಪದಾಧಿಕಾರಿಗಳಾದ ವಿ.ಸಿ. ದೇವರಾಜ್, ಕೆ.ಎ. ಅಬ್ದುಲ್ ರಜಾಕ್, ಎಂ.ಕೆ. ವಸಂತ, ಎಂ.ಕೆ. ರಘುನಂದ, ಜಿ.ಕೆ. ಸೋಮಯ್ಯ, ಹೆಚ್.ಜೆ. ರಾಜೇಶ್ ಎಂ.ಕೆ. ಹರೀಶ್ ಇನ್ನಿತರರು ಹಾಜರಿದ್ದರು.