ಮಡಿಕೇರಿ, ಜು. 16: ದಕ್ಷಿಣ ಭಾರತದ ಧಾರ್ಮಿಕ ವಿದ್ಯಾ ಸಂಸ್ಥೆಯಾದ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನ 53 ನೇ ಅಂಗ ಸಂಸ್ಥೆಯಾಗಿ ಸುಂಟಿಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಜೂನಿಯರ್ ಶರೀಹತ್ ಕಾಲೇಜು ತಾ.18 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕಾಲೇಜು ಸಮಿತಿಯ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜಿನ ನೂತನ ಕಟ್ಟಡವನ್ನು ಅಂದು ಬೆಳಗ್ಗೆ 10 ಗಂಟೆಗೆ ಕಲ್ಲಿಕೋಟೆಯ ಸಂಯುಕ್ತ ಖಾಝಿ ಮುಹಮ್ಮದ್ ಕೋಯಾ ಜಮಲುಲೈಲಿ ತಂಙಳ್ ಉದ್ಘಾಟಿಸಲಿದ್ದಾರೆ ಎಂದರು. ಸಲಾಹುದ್ದೀನ್ ಫೈಝಿ ವಲ್ಲಪ್ಪುಯ ಮುಖ್ಯ ಭಾಷಣ ಮಾಡಲಿದ್ದಾರೆ. ಕೊಡಗಿನ ಉಪಖಾಝಿ ಅಲ್ದುಲ್ಲಾ ಫೈಝಿ ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.
ಪ್ರಥಮ ವರ್ಷದ ಪಿಯುಸಿಗೆ ಪ್ರಥಮ ಬ್ಯಾಚ್ನಲ್ಲಿ 20 ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಲಾಗುತ್ತಿದೆ. ಮುಂದಿನ ವರ್ಷದಿಂದ 33 ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನೀಡಲು ನಿರ್ಧರಿಸಿದ್ದು, ಎರಡೂ ಶಿಕ್ಷಣವನ್ನು ಒಂದೇ ಕಾಲೇಜಿನಲ್ಲಿ ಸಮನ್ವಯವಾಗಿ ನೀಡಲಾಗುವದು. ಕೊಡಗು ಜಿಲ್ಲೆಯಲ್ಲಿ ಈ ಪ್ರಯತ್ನ ಇದೇ ಪ್ರಥಮವಾಗಿದೆ. ಕಾಲೇಜಿನಲ್ಲಿ 7 ವರ್ಷಗಳ ಕೋರ್ಸ್ ನೀಡಲಾಗುತ್ತಿದ್ದು, ಪಿಯುಸಿ, ಪದವಿ ಹಾಗೂ ಎಂ.ಎ.ವರೆಗಿನ ಪದವಿಯನ್ನು ಪಡೆಯಬಹುದಾಗಿದೆ. ಅರೆಬಿಕ್, ಇಂಗ್ಲೀಷ್, ಕನ್ನಡ, ಉರ್ದು ಹಾಗೂ ಮಲಯಾಳಂ ಭಾಷಾ ಕಲಿಕೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿರುವ ಸಾಮಾನ್ಯ ಜ್ಞಾನ ತರಬೇತಿ, ಡಿಜಿಟಲೈಸ್ಡ್ ಸ್ಮಾರ್ಟ್ ಕ್ಲಾಸ್ರೂಂ ಮತ್ತು ಕÀಂಪ್ಯೂಟರ್ ತರಬೇತಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ, ಭಾಷಣ, ಲೇಖನ, ಸಂವಾದ ಮೊದಲಾದ ವಿಶೇಷ ತರಬೇತಿಗಳನ್ನು ನಿಪುಣತೆ ಪಡೆದವರಿಂದಲೇ ನೀಡಲಾಗುವದು ಎಂದು ಸಿ.ಎಂ.ಹಮೀದ್ ಮೌಲವಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಹಾಗೂ ಆಹಾರದ ವ್ಯವಸ್ಥೆಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಟ್ರಸ್ಟಿಗಳ ಹಾಗೂ ದಾನಿಗಳ ನೆರವಿನಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಯಾವದೇ ರೀತಿಯ ಅನೈತಿಕ ಹಾಗೂ ಅಧರ್ಮದ ಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ ಶಿಕ್ಷಣವನ್ನು ಪಡೆದು ಪ್ರಜ್ಞಾವಂತ ಮತ್ತು ವಿದ್ಯಾವಂತ ನಾಗರಿಕರಾಗಿ ಹೊರಬರಬೇಕೆನ್ನುವದೇ ಸಂಸ್ಥೆಯ ಗುರಿಯಾಗಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುವದು ಎಂದು ಸಿ.ಎಂ.ಹಮೀದ್ ಮೌಲವಿ ತಿಳಿಸಿದರು.
ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾ ಸಂಸ್ಥೆಯಾದ ಜಾಮಿಯಾ ಸೂರಿಯಾ ಅರಬಿಕ್ ಕಾಲೇಜಿನಿಂದ ಪದವಿ ಪಡೆದ ಸುಮಾರು 7000 ಫೈಝಿ ಬಿರುದುದಾರಿಗಳು ದೇಶದ ವಿವಿಧೆಡೆ ನಾಗರಿಕ ಸೇವೆಗಳಲ್ಲಿ ಸೇವಾ ನಿರತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಪ್ರಸ್ತುತ ಸುಂಟಿಕೊಪ್ಪದಲ್ಲಿ ಆರಂಭಗೊಳ್ಳುತ್ತಿರುವ ಜೂನಿಯರ್ ಶರೀಹತ್ ಕಾಲೇಜಿಗೆ ಲಿಖಿತ ಪರೀಕ್ಷೆಯ ಮೂಲಕ ಶೇ.60 ರಷ್ಟು ಅಂಕ ಪಡೆದ 20 ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆÉಂದು ಸಿ.ಎಂ. ಹಮೀದ್ ಮೌಲವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಫ್.ಎ. ಮಹಮ್ಮದ್, ಖಜಾಂಚಿ ಹಾರೂನ್, ಸದಸ್ಯರುಗಳಾದ ಕೆ.ಐ.ರಫೀಕ್ ಹಾಗೂ ಹಸನ್ ಕುಂಞ ಉಪಸ್ಥಿತರಿದ್ದರು.