ಮಡಿಕೇರಿ, ಸೆ. 16: ವ್ಯಕ್ತಿ ಯೋರ್ವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿ ಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಎಂ.ಕೆ. ದಿನೇಶ್ ಎಂಬವರು 30.4.2011 ರಂದು ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿನ ಕ್ವಾಲಿಟಿ ವೈನ್ಸ್ನಲ್ಲಿ ಮದ್ಯ ಖರೀದಿಗೆಂದು ತೆರಳಿದ್ದರು. ಅಲ್ಲಿ ಗಾಳಿಬೀಡುವಿನ ಎಂ.ಕೆ. ಬೋಪಣ್ಣ ಹಾಗೂ ವಿ.ಎಸ್. ಗಿರೀಶ್ ಎಂಬವರ ನಡುವೆ ಹಣದ ವಿಚಾರದಲ್ಲಿ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭ ದಿನೇಶ್, ಬೋಪಣ್ಣನಿಗೆ ಮೊದಲು ನನಗೆ ಮದ್ಯ ನೀಡಿ ನಂತರ ಮಾತನಾಡಿಕೊಳ್ಳಿ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬೋಪಣ್ಣ ಹಾಗೂ ಆತನೊಟ್ಟಿಗಿದ್ದ ಹೊಸಬಡಾವಣೆಯ ಆರ್.ಆರ್. ಸುರೇಂದ್ರ ಎಂಬವರು ದಿನೇಶ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ್ದಲ್ಲದೆ ಬಾಟಲಿ ಹಾಗೂ ಕತ್ತಿಯಿಂದಲೂ ಕಡಿದು ಗಾಯಗೊಳಿಸಲಾಗಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ದಿನೇಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದರಂತೆ ತನಿಖೆ ನಡೆಸಿದ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ. ಜಿ.ಎಂ.ಎಂ. ಮಹಾ ಸ್ವಾಮೀಜಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ ಆರೋಪಿಗಳಿಗೆ ತಲಾ 5 ವರ್ಷಗಳ ಕಠಿಣ ಸಜೆ ಮತ್ತು 10,000 ರೂ. ದಂಡ, ಮಾರಕಾಯುದ್ದಗಳಿಂದ ತೀವ್ರ ಗಾಯಗೊಳಿಸಿದ ಅಪರಾಧಕ್ಕಾಗಿ ತಲಾ 5 ವರ್ಷಗಳ ಶಿಕ್ಷೆ ಮತ್ತು 10,000 ರೂ. ದಂಡವನ್ನು ಮತ್ತು ಫಿರ್ಯಾದುದಾರರನ್ನು ತೀವ್ರವಾಗಿ ಗಾಯಗೊಳಿಸಿದ ಅಪರಾಧಕ್ಕಾಗಿ ಪುನಃ 1 ವರ್ಷದ ಸಜೆ ಮತ್ತು 1000 ರೂ. ದಂಡ ವಿಧಿಸಲಾಗಿದೆ. ವಸೂಲಾತಿಯಾಗುವ ದಂಡದ ಒಟ್ಟು 42,000 ದಲ್ಲಿ ರೂ. 40,000 ವನ್ನು ಫಿರ್ಯಾದುದಾರನಿಗೆ ಪರಿಹಾರವಾಗಿ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಎ.ಪಿ. ಫಿರೋಜ್ಖಾನ್, ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇವರು ಅಂತಿಮ ವಾದ ಮಂಡಿಸಿದ್ದರು.