ನಾಪೋಕ್ಲು, ಜು. 3: ಪಟ್ಟಣದ ಮಧ್ಯಭಾಗದಲ್ಲಿ ಒಂದು ಜೀವ ಬಲಿತೆಗೆದುಕೊಂಡ ಗುಂಡಿಯೊಂದು ಮತ್ತೊಮ್ಮೆ ಮೃತ್ಯುಕೂಪವಾಗಿ ಬಾಯ್ದೆರೆದು ನಿಂತಿದೆ. ನಾಪೋಕ್ಲು ಪಟ್ಟಣದ ಕೇಂದ್ರಬಿಂದು ಬೇತು ರಸ್ತೆಯ ಬಳಿ ಸ್ಲ್ಯಾಬ್‍ಗಳು ಒಡೆದು ಹೋಗಿ ಮಕ್ಕಳು ವೃದ್ದರಾದಿಯಾಗಿ ನೂರಾರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮತ್ತೆ ಗುಂಡಿಯಾಗಿದೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮೂರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಬಿದ್ದು ತಲೆಗೆ ತೀವ್ರ ತರಹದ ಪೆಟ್ಟಾದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಿದರೂ ಪ್ರಾಣ ಕಳೆದುಕೊಂಡಿದ್ದರು. ಗುಂಡಿಯ ಬಗ್ಗೆ ಆಗ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಗುಂಡಿ ಮುಚ್ಚದೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕರು ಬಿದ್ದು ಮೃತಪಟ್ಟಿದ್ದರು. ಮತ್ತೆ ಕೈಗೊಂಡ ಕಾಮಗಾರಿ ಕಳಪೆಯಾದ ಕಾರಣ ಇದೀಗ ಮತ್ತೆ ಗುಂಡಿ ಯಾಗಿದ್ದು ಅಪಾಯಕ್ಕೆ ಆಹ್ವಾನ ನೀಡಿದೆ. ವಿದ್ಯುತ್ ಕೊರತೆಯ ಹಿನ್ನೆಲೆ ಯಲ್ಲಿ ಇದೀಗ ರಾತ್ರಿ ವೇಳೆ ವಿದ್ಯುತ್ ಇಲ್ಲದಿರುವ ಸಮಯದಲ್ಲಿ ಮತ್ತೆ ಯಾರಾದರೂ ಅಮಾಯಕರು ಗುಂಡಿಗೆ ಬಿದ್ದು ಅಪಾಯಕ್ಕೆ ಒಳಗಾಗುವ ಮುನ್ನ ಸಂಬಂಧಪಟ್ಟ ವರು ಗುಂಡಿ ಮುಚ್ಚಲು ಕ್ರಮ ಕೈಗೊಳ್ಳ ಬೇಕಾಗಿದೆ. -ದುಗ್ಗಳ ಸದಾನಂದ