ಕುಶಾಲನಗರ, ಅ. 9 : ಕಲುಷಿತ ಗೊಳ್ಳುತ್ತಿರುವ ಜೀವನದಿ ಕಾವೇರಿ ಯನ್ನು ಸಂರಕ್ಷಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ. ಅವರು ಕುಶಾಲನಗರದ ಕೊಡವ ಸಮಾಜದಲ್ಲಿ ನಡೆದ ಕೈಲ್ ಪೊಳ್ದ್ ಆಟೋಟ ಮತ್ತು ಸಂತೋಷ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕಾವೇರಿ ನದಿ ಹರಿಯುವ ಸಂದರ್ಭ ಮೂಲದಿಂದಲೇ ಕಲುಷಿತ ಗೊಳ್ಳುತ್ತಿರುವದು ಕಂಡುಬರುತ್ತಿದೆ. ಕೊಡಗು ಮತ್ತು ಕೊಡವ ಜನಾಂಗದ ಕುಲದೇವತೆ ಯಾಗಿರುವ ಕಾವೇರಿ ಮಾತೆಯನ್ನು ಸಂರಕ್ಷಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕೊಡವ ಸಮಾಜದ ಪದಾಧಿಕಾರಿಗಳ ಸ್ಥಾನಗಳಿಗೆ ನಡೆಸುವ ಚುನಾವಣೆಗಳನ್ನು ರದ್ದು ಪಡಿಸಿ ಸಮುದಾಯದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಒಮ್ಮತದಿಂದ ಅಧಿಕಾರ ವಹಿಸಿಕೊಡುವ ಮೂಲಕ ಉತ್ತಮ ಕಾರ್ಯಗಳಿಗೆ ಮುಂದಾಗ ಬೇಕಾಗಿದೆ. ಆಚಾರ-ವಿಚಾರ, ಸಂಸ್ಕøತಿಗಳನ್ನು ತಿಳಿಸಿಕೊಡುವ ಮೂಲಕ ಸಮಾಜದ ಏಳಿಗೆಗಾಗಿ ಪ್ರಯತ್ನಿಸಬೇಕಾಗಿದೆ.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಆಕಾಶವಾಣಿಯ ಉದ್ಘೋಷಕಿ ಕೂಪದಿರ ಶಾರದ ನಂಜಪ್ಪ ಮಾತನಾಡಿ ಸಮುದಾಯ ಬಾಂಧವರು ಒಗ್ಗಟ್ಟಿನಿಂದ ತಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕೊಡವ ಸಮಾಜದ ಕಟ್ಟಡದ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ರೂ.5 ಲಕ್ಷಗಳ ಸಹಕಾರ ಕೋರಿ ಮನವಿಯೊಂದನ್ನು ವೀಣಾ ಅಚ್ಚಯ್ಯ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಮನವಿಗೆ ಸ್ಪಂದಿಸಿದ ವೀಣಾ ಅಚ್ಚಯ್ಯ ಅವರು ಅನುದಾನ ಕಲ್ಪಿಸುವದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ ಸಮಾಜದ ಗೌರವ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಮಾಜದ ಪುರುಷ ಮತ್ತು ಮಹಿಳೆಯರಿಗೆ ವಿಷ ಜಮಖಾನ, ತೆಂಗಿನ ಕಾಯಿಗೆ ಗುಂಡು ಹೊಡೆಯುವದು, ತೆಂಗಿನ ಕಾಯಿ ಎಳೆಯುವದು ಮತ್ತು ಮಕ್ಕಳಿಗೆ ಮಿಠಾಯಿ ಹೆಕ್ಕುವ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.