ಮೂರ್ನಾಡು, ನ. 13: ಜೀಪ್ ಹಾಗೂ ಹೋಂಡಾ ಆಕ್ಟಿವಾ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ, ಆ್ಯಕ್ಟಿವಾ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಜೀಪು ಚಾಲಕ ಮಹೇಶ್ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದವರು. ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ಮಹೇಶ್ ತಮ್ಮ ಹೋಂಡಾ ಆಕ್ಟಿವಾ (ಕೆಎ12 - ಕೆ2419)ದಲ್ಲಿ ಮೂರ್ನಾಡಿನಿಂದ ವೀರಾಜಪೇಟೆಗೆ ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ಬಾಡಗ ರಸ್ತೆಯ ಬಳಿ ದುರ್ಘಟನೆ ಸಂಭವಿಸಿದೆ. ವೀರಾಜಪೇಟೆಯಿಂದ ಮೂರ್ನಾಡಿ ನತ್ತ ಬರುತ್ತಿದ್ದ ಸೂರಜ್ ಅವರಿಗೆ ಸೇರಿದ ಜೀಪಿನ (ಕೆಎ 12ಪಿ8245) ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಹೋಂಡಾ ಆಕ್ಟಿವಾ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಮಹೇಶ್ ಅವರ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.