ಸೋಮವಾರಪೇಟೆ,ಆ.11: ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಲಿದ್ದು, ಜಿಲ್ಲೆಯ ಪ್ರವಾಸಿ ತಾಣಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಸೋಮವಾರಪೇಟೆಗೆ ಆಗಮಿಸಿದ್ದ ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸುವ ಇರಾದೆಯಿದ್ದು, ಈ ಬಗ್ಗೆ ಈಗಾಗಲೇ ಕಾರ್ಯೋನ್ಮುಖ ವಾಗಿರುವದಾಗಿ ತಿಳಿಸಿದರು.

ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅವರ ಮನವಿಯ ಮೇರೆಗೆ ತಾನು ರಾಜ್ಯ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಿದ್ದು, ಸಚಿವ ಪ್ರಿಯಾಂಕ ಖರ್ಗೆ ಅವರೂ ಕೊಡಗಿನ ಪ್ರವಾಸೋದ್ಯಮ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ತಕ್ಷಣವೇ ಸ್ಥಳೀಯರನ್ನೂ ಒಳಗೊಂಡಂತೆ ಪ್ರಮುಖರ, ಅಧಿಕಾರಿಗಳ, ವಿವಿಧ ಜನಪ್ರತಿನಿಧಿಗಳ ಸಭೆ ಕರೆದು ಪ್ರವಾಸೋದ್ಯಮ ಉನ್ನತಿಗೆ ರೂಪುರೇಷೆ ಸಿದ್ದಪಡಿಸ ಲಾಗುವದು ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶವಿದ್ದು, ಪರಿಸರ ರಕ್ಷಣೆ,ಮಾಲಿನ್ಯ ತಡೆಯೊಂದಿಗೆ ಹೇಗೆ ಅಭಿವೃದ್ಧಿ ಗೊಳಿಸಬಹುದು

(ಮೊದಲ ಪುಟದಿಂದ) ಎಂಬ ಬಗ್ಗೆ ವಿಸ್ತøತ ಚರ್ಚೆ ನಡೆಯಬೇಕಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕೊರತೆಯೂ ಇದ್ದು, ಇದೆಲ್ಲವನ್ನೂ ಸರಿಪಡಿಸಿಕೊಂಡು ಮುಂದಿನ ರೂಪುರೇಷೆ ಸಿದ್ದಪಡಿಸಿ ಸಚಿವರಿಗೆ ವರದಿ ಸಲ್ಲಿಸಲಾಗುವದು. ಸಚಿವರೂ ಸಹ ಅಭಿವೃದ್ಧಿಗೆ ಅನುದಾನ ದೊರಕಿಸುವ ಭರವಸೆ ನೀಡಿದ್ದಾರೆ ಎಂದು ವೀಣಾ ಅಚ್ಚಯ್ಯ ತಿಳಿಸಿದರು.

ಮಳೆಗಾಲವಾದ್ದರಿಂದ ಕೊಡಗಿನ ಹಲವು ಗ್ರಾಮೀಣ ಭಾಗದ ರಸ್ತೆಗಳು ಗುಂಡಿಮಯವಾಗಿದ್ದು, ಮಳೆಗಾಲ ಮುಗಿದ ತಕ್ಷಣ ದುರಸ್ತಿ ಕಾರ್ಯ ಪ್ರಾರಂಭಿಸಲಾಗುವದು. ರಸ್ತೆ ನಿರ್ಮಾಣಕ್ಕೆ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಹದಗೆಟ್ಟಿರುವ ರಸ್ತೆಗಳ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಡಗಿನ ಮೇಲೆ ವಿಶೇಷ ಕಾಳಜಿಯಿದ್ದು, ಅನುದಾನ ದೊರಕಿಸಿಕೊಡಲಿದ್ದಾರೆ. ಈಗಾಗಲೇ ವಿಶೇಷ ಪ್ಯಾಕೇಜ್‍ನಲ್ಲೂ ಅನುದಾನ ಮೀಸಲಿಟ್ಟಿದ್ದಾರೆ. ತನಗೆ ವಾರ್ಷಿಕ ರೂ. 2ಕೋಟಿ ಅನುದಾನ ಬರಲಿದ್ದು, ಆದ್ಯತೆ ಮೇರೆ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸ ಲಾಗುವದು ಎಂದು ವೀಣಾ ಅವರು ತಿಳಿಸಿದರು.

ಕಾವೇರಿ ನೀರಾವರಿ ನಿಗಮಕ್ಕೆ ರೂ. 29 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕ್ಯಾಬಿನೆಟ್ ಅನುಮೋದನೆಯಷ್ಟೇ ಬಾಕಿಯಿದೆ. ಈ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ ಎಂದು ಕೆಲವರು ವೃಥಾ ಗುಲ್ಲೆಬ್ಬಿಸುತ್ತಿದ್ದಾರೆ. ಭಾಗಮಂಡಲ ಸೇತುವೆ ದುರಸ್ತಿಗೂ ಕ್ರಮ ಕೈಗೊಳ್ಳಲಾಗಿದೆ. ರೂ. 80 ಲಕ್ಷ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ ಎಂದರು.

ರಾಜ್ಯ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲಪಿಸಲು ಅಧಿಕಾರಿಗಳು ಹೆಚ್ಚಿನ ಪ್ರಯತ್ನ ಮಾಡಬೇಕು. ಜಿಲ್ಲೆಯಲ್ಲಿ ಆಡಳಿತ ಯಂತ್ರ ಇನ್ನಷ್ಟು ಚುರುಕಾಗಬೇಕು. ನೂತನ ಜಿಲ್ಲಾಧಿಕಾರಿಗಳು ಕೊಡಗಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ನಿರ್ವಹಿಸುತ್ತಿದ್ದು, ಇದಕ್ಕೆ ಇತರ ಅಧಿಕಾರಿಗಳೂ ಕೈಜೋಡಿಸಬೇಕು ಎಂದ ವೀಣಾ ಅಚ್ಚಯ್ಯ ಅವರು, ರಾಜ್ಯ ಸರ್ಕಾರದ ಮೇಲೆ ಜನತೆಯ ಭರವಸೆ ಹೆಚ್ಚಾಗಿದೆ. ತನಗೆ ಸ್ಥಾನ ನೀಡುವ ಮೂಲಕ ಕೊಡಗಿಗೆ ಆದ್ಯತೆ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಮಾಡುತ್ತೇನೆ ಎಂದರು.

ರಾಜ್ಯ ಸರ್ಕಾರ ಕೊಡಗಿಗೆ ನೀಡಿದ ವಿಶೇಷ ಪ್ಯಾಕೇಜ್‍ನ ಅನುದಾನ ಶೀಘ್ರದಲ್ಲೇ ಬಿಡುಗಡೆ ಯಾಗಲಿದೆ. ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಯಾಗಿದ್ದು, ವಿಶೇಷ ಪ್ಯಾಕೇಜ್‍ನ ಹಣ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆಯಷ್ಟೇ. ವಿಶೇಷ ಪ್ಯಾಕೇಜ್ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದ್ದು, ಮಳೆಗಾಲ ನಂತರ ಕಾಮಗಾರಿಗಳು ಪ್ರಾರಂಭ ವಾಗಲಿವೆ. ಈ ಬಗ್ಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಇವರದೇ ಸರ್ಕಾರ ಅಧಿಕಾರ ದಲ್ಲಿದ್ದಾಗ ಕೊಡಗಿಗೆ ಏನು ಮಾಡಿದ್ದಾರೆ? ಇವರು 17 ವರ್ಷ ಶಾಸಕರಾಗಿದ್ದರೂ ಕೆಲವೆಡೆ ಇಂದಿಗೂ ಬಡಿಗೆಯ ಮೇಲೆ ನದಿ ದಾಟುತ್ತಿದ್ದಾರೆ. ಇವರ ಬಗ್ಗೆ ಕಾಳಜಿ ಇಲ್ಲ. ಕಾಲಕ್ಕೆ ಅನುಗುಣವಾಗಿ ಜನತೆಯ ಬೇಡಿಕೆಯೂ ಹೆಚ್ಚುತ್ತದೆ. ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಜನಪ್ರತಿನಿಧಿಗಳಿಂದ ಆಗಬೇಕು. ಇದನ್ನು ಬಿಟ್ಟು ವೃಥಾ ಆರೋಪ ಮಾಡಬಾರದು ಎಂದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ವೈಮನಸ್ಸು ಇರಬಾರದು. ಜಿ.ಪಂ. ಸಿಇಓ ಅವರು ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಅಂತೆಯೇ ಜನಪ್ರತಿನಿಧಿಗಳೂ ಸಹ ಅಧಿಕಾರಿಗಳಿಗೆ ಗೌರವ ನೀಡಬೇಕು. ನಿನ್ನೆ ನಡೆದ ಬೆಳವಣಿಗೆ ತನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಮಾತನಾಡುತ್ತೇನೆ ಎಂದರು.

ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಸಾರ್ವಜನಿಕವಾಗಿ ಆರೋಪಿಸು ತ್ತಿದ್ದಾರೆ. ಆದರೆ ಹಲವು ಕಾಮಗಾರಿ ಗಳಿಗೆ ಭೂಮಿ ಪೂಜೆ ನೆರವೇರಿಸು ತ್ತಿದ್ದಾರೆ. ಇಂತಹ ಕಾಮಗಾರಿಗಳಿಗೆ ಹಣ ಎಲ್ಲಿಂದ ಬಂತು? ಎಂಬದನ್ನು ರಂಜನ್ ಸ್ಪಷ್ಟಪಡಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸವಾಲು ಹಾಕಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್, ಬ್ಲಾಕ್ ಕಾರ್ಯದರ್ಶಿ ವಿ.ಎ. ಲಾರೆನ್ಸ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಎಸ್‍ಸಿ ಎಸ್‍ಟಿ ಮೋರ್ಚಾ ಅಧ್ಯಕ್ಷ ಟಿ.ಈ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.