ವೀರಾಜಪೇಟೆ, ಸೆ. 30: ಕೊಡಗಿನ ಜನರು ನೆಲ, ಜಲಗಳ ರಕ್ಷಣೆಗಾಗಿ, ಮುಂದಿನ ಬದುಕಿಗಾಗಿ, ಎದುರಾಗುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಶಾಸಕರಾಗಲಿ, ಸಂಸದರಾಗಲಿ, ಯಾವ ಜನಪ್ರತಿನಿಧಿಯಾಗಲಿ ಜನರ ಮುಂದೆ ನಿಂತು ಸಮಜಾಯಿಸಿಕೆ ಭರವಸೆ ನೀಡಿ ಆಶಾಭಾವನೆ ಮೂಡಿಸದೆ ಅದನ್ನು ಗಂಭೀರವಾಗಿಯೂ ಪರಿಗಣಿಸದೆ ಇರುವದು ವಿಷಾದನೀಯ ಎಂದು ಕೊಡಗು ಜಿಲ್ಲೆ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ವಿಷಾದಿಸಿದರು.
ಅಮ್ಮತ್ತಿ ರೈತ ಸಂಘದ ವತಿಯಿಂದ ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕ್ರಮ ಎಂಬ ವಿಚಾರ ಸಂಕೀರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕೊಡಗಿನಾದ್ಯಂತ ಇಂದು ಕಾಡನೆ ಹಾವಳಿ ಮೀತಿ ಮೀರಿದೆ, ಶ್ರೀಮಂಗಲ ಭಾಗದಲ್ಲಿ ಕಾಡಾನೆ ಜೊತೆಗೆ ಕಾಡು ಕೋಣಗಳ ಹಾವಳಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಅರಣ್ಯ ಸಚಿವರನ್ನು ಭೇಟಿಯಾಗಿ ಬಂದರೂ ಯಾವದೇ ಪ್ರಯೋಜನವಾಗಿಲ್ಲ. ಅರಣ್ಯದೊಳಗಿನ ತೇಗ ತೆಗೆದು ಅಲ್ಲಿ ಆನೆ ಸೇರಿದಂತೆ ವನ್ಯ ಜೀವಿಗೆ ಬೇಕಾದ ಆಹಾರ ಬೆಳೆಸಿ ಎಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಯಾವದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಫಸಲು ಪಡೆಯಲು 6 ವರ್ಷ ಬೇಕಾದ ಕಾಫಿ ಗಿಡ ಒಂದಕ್ಕೆ ರೂ. 200 ಪರಿಹಾರ, ಸತ್ತವರಿಗೆ ರೂ. 5 ಲಕ್ಷ , ಬೆಳೆಹಾನಿಗೆ ಚಿಲ್ಲರೆ ಹಣ ನೀಡಲಾಗುತ್ತಿದೆ. ಹಿರಿಯ ಅರಣ್ಯ ಅಧಿಕಾರಿ ನೀಡಿದ ಭರವಸೆಯಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಹೊಣೆ ಸರಕಾರದ್ದು. ಈ ನಿಟ್ಟಿನಲ್ಲಿ ಸರಕಾರ ಯೋಜನೆಯ ರೂ. 260 ಕೋಟಿ ಶೀಘ್ರ ಬಿಡುಗಡೆಯಾಗಬೇಕು. ಏನೇ ಅದರು ಸಂಘ-ಸಂಸ್ಥೆ, ಜನರು, ಹೋರಾಟ ಮಾಡದೆ ಹೋದರೆ ಬದುಕು ಎಂಬದೇ ಇಲ್ಲ. ಮತಬೇದ ಮರೆತು ಜನ ಸಂಘಟಿತರಾಗಿ ಹೋರಾಟ ನಡೆಸಬೇಕು. ಇದರಲ್ಲಿ ಯುವ ಜನರು ಮುಖ್ಯ ಪಾತ್ರ ವಹಿಸಬೇಕು ಎಂದು ಶಂಕರು ನಾಚಪ್ಪ ಹೇಳಿದರು.
ರೈತ ಸಂಘದ ಸಂಚಾಲಕ ಕೇಚಂಡ ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿ ಕಾಡನೆ ಹಾವಳಿ ತಡೆಯಲು ಯಾವ ಶಾಶ್ವತ ಪರಿಹಾರ ಕ್ರಮ ಸರಕಾರ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಕಾಡನೆ ಹಾವಳಿ ಹೆಚ್ಚಿದೆ. ಅರಣ್ಯ ಇಲಾಖೆ ಇದೀಗ ಶಾಶ್ವತ ಪರಿಹಾರಕ್ಕಾಗಿ ಅಗತ್ಯವಾದ ರೂ. 260 ಕೋಟಿ ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡಬೇಕು. ಇಂದು ರೈತರು ಪರಿಹಾರಕ್ಕೆ ಅರ್ಜಿ ಹಾಕಿದರೆ ಅದಕ್ಕೆ ಖರ್ಚು ಮಾಡಿದ ಹಣ ಹಿಂತಿರುಗಿ ಬರುತ್ತದೆ ಅಷ್ಟೆ ವಿನಹ ಸೂಕ್ತ ಪರಿಹಾರ ಇಲ್ಲ. ಮಾನವ ಜೀವಕ್ಕೆ ಬೆಲೆ ಇಲ್ಲದಾಗಿದೆ. ಕಾರ್ಮಿಕರು ಕಾಡನೆಯಿಂದ ಸತ್ತಾಗ ಕುಟುಂಬದ ಅವಲಂಬಿತರು, ರೈತರ ಕುಟುಂಬಗಳು ಅನಾಥರಾಗುತ್ತಾರೆ. ಅಷ್ಟೆ. ಬೆಳೆ ಹಾನಿಯನ್ನು ಯಾವ ರೀತಿಯಲ್ಲಿ ಮತ್ತೆ ತುಂಬಿ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಕೊಡಗಿನ ಮೂರು ತಾಲೂಕಿನಲ್ಲಿ ಕಾಡನೆ ಹಾವಳಿಯನ್ನು ತಡೆಯಲು ಶಾಶ್ವತ ಪರಿಹಾರವನ್ನು ಸರಕಾರ ಶೀಘ್ರ ಅನುಷ್ಠಾನಕ್ಕೆ ತರಬೇಕು ಹಾಗೂ ಅಗತ್ಯ ಅನುದಾನ ಒದಗಿಸಬೇಕು ಎಂದರು.
ರೈತ ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ ಮಲೆನಾಡಿನ ರೈತರು ಭತ್ತ ಬೆಳೆಯುವಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ವಿಚಾರ ಮಂಡಿಸಿದರು. ಕೇಂದ್ರ ತರಲು ಉದ್ದೇಶಿಸಿರುವ ಕಾಫಿ ಕಾಯಿದೆ ತಿದ್ದುಪಡಿಯ ಕುರಿತು ಮಾತನಾಡಿ, ಈ ಕಾಯಿದೆಯಿಂದ ಕಾಫಿ ಬೆಳೆಗಾರರಿಗೆ ಉತ್ತಮ ಸೌಲತ್ತು ಸೌಲಭ್ಯ ದೊರೆಯಲಿದೆ ಎಂದರು.
ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕುರಿತು ರೈತ ಸಂಘದ ಕಾರ್ಯದರ್ಶಿ ಉದ್ದಪಂಡ ಜಗತ್ ಕೊಂಗಂಡ ಪೊನ್ನಪ್ಪ, ಅಚ್ಚಾಂಡಿರ ಬೋಪಣ್ಣ, ಕಾವಡಿಚಂಡ ಪೂಣಚ್ಚ ಮುಂತಾದವರು ಸಭೆಯಲ್ಲಿ ವಿಚಾರ ಮಂಡಿಸಿದರು.
ಈ ಸಂದರ್ಭ ಮಾತನಾಡಿದ ಐನಂಡ ಜಪ್ಪು ಅಚ್ಚಪ್ಪ, ನಾವು ಕೊಡಗಿನ ಯಾವ ಜಲ್ವಂತ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುವ ಪ್ರವೃತಿ ಬೆಳೆಸಿಕೊಂಡಿಲ್ಲ. ಹೈಟೆನ್ಷನ್ ಹೋರಾಟದ ವೈಫಲ್ಯ, ರೈಲು ವಿಚಾರದಲ್ಲಿ ಹೋರಾಟ ಮಾಡದೆ ಇರುವದು, ಪರಿಸರ ನಾಶವಾಗುತ್ತಿರುವ ಬಗ್ಗೆ ಕಾಳಜಿ ಇಲ್ಲದೆ ಇರುವದು. ಹಿಂದೆ ಕಂಬದ ಕಡವು, ಬರಪೋಳೆ ಅಣೆಗಳ ವಿರುದ್ಧ ನಡೆಸಿದ ಸಂಘಟಿತ ಹೋರಾಟವಾದರೆ ಮಾತ್ರ, ಕಾಡಾನೆ ಹಾವಳಿ ಶಾಶ್ವತ ತಡೆ ಮುಂತಾದ ಗಂಭೀರ ವಿಚಾರಗಳಿಂದ ಕೊಡಗು ಉಳಿಯಬಹುದು ಎಂದರು.
ಈ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಸಭೆಯನ್ನು ಉದೇಶಿಸಿ ಮತನಾಡಿದರು. ಮೊದಲಿಗೆ ಟಾಟಾ ಕಾಫಿ ಸಂಸ್ಥೆಯ ಅರಮಣಮಾಡ ಚಿಟ್ಯಪ್ಪ ಹಾಗೂ ಕಾರ್ತಿಕ್ ಇಂದು ಕಾಡಾನೆ ನಾಡಿನಲ್ಲಿ ಬಂದು ಮಾಡುತ್ತಿರುವ ಹಾವಳಿಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಕಾಡಾನೆ ಹಾವಳಿ ಶಾಶ್ವತ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಅಗತ್ಯ 260 ಕೋಟಿ ಶೀಘ್ರ ಮಂಜೂರಾತಿ ನೀಡಬೇಕು. ಅಲ್ಲದೆ ಮುಂದೆ ಕಾಡಾನೆಗೆ ಹಾಗೂ ವನ್ಯಜೀವಿಗೆ ಕಾಡಿನಲ್ಲಿ ಆಹಾರಕ್ಕಾಗಿ ಅಗತ್ಯ ಮರ-ಗಿಡ ನೆಡಲು ರೂ. 500 ಕೋಟಿ ನೀಡಬೇಕು. ಭತ್ತ ಬೆಳೆಯುವ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದು, ಆ ಬೆಳೆಗಾರರಿಗೆ ಎಕ್ರೆಗೆ ರೂ. 15 ಸಾವಿರ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಂಡು ಮುಂದಿನ ಬಜೆಟ್‍ನಲ್ಲಿ ಮಂಡಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಕುಟ್ಟಂಡ ಪ್ರಿನ್ಸ್ ಗಣಪತಿ ಸ್ವಾಗತಿಸಿ, ವಂದಿಸಿದರು, ರೈತ ಸಂಘದ ಸದಸ್ಯ ಮಾಚಿಮಂಡ ಸುರೇಶ್ ನಿರೂಪಿಸಿದರು. ಮೊದಲಿಗೆ ಪಠಾಣ್‍ಕೋಟ್ ಹಾಗೂ ಉರಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.