ಮಡಿಕೇರಿ, ಆ. 12: ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಿಂದ ಪ್ರತಿನಿಧಿಗಳಾಗಿರಬಹುದು, ಆದರೆ ಕೊಡಗಿನ ಅಭಿವೃದ್ಧಿಯ ವಿಚಾರ, ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಪಕ್ಷ-ಬೇಧ ತೋರದೆ ಒಂದಾಗಿ ಸ್ಪಂದಿಸುವದಾಗಿ ನೂತನ ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಭರವಸೆಯಿತ್ತರು.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಇಂದು ನಗರದ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಆಡಳಿತ ಹಾಗೂ ವಿಪಕ್ಷದಿಂದ ನೂತನವಾಗಿ ಎಂಎಲ್‍ಸಿ ಗಳಾಗಿರುವ ವೀಣಾ ಅಚ್ಚಯ್ಯ ಹಾಗೂ ಸುನಿಲ್ ಸುಬ್ರಮಣಿ ಅವರುಗಳ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಿಬ್ಬರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ತಮ್ಮ ಚಿಂತನೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಸುನಿಲ್ ಸುಬ್ರಮಣಿ ಈ ಹಿಂದೆಯೂ ಹಲವಾರು ಮಂದಿ ಹಿರಿಯರು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಆ ಸಂದರ್ಭವೂ ಆಡಳಿತ ಹಾಗೂ ವಿಪಕ್ಷದಿಂದ ಪ್ರತಿನಿಧಿಗಳಿದ್ದರು. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಎ.ಕೆ. ಸುಬ್ಬಯ್ಯ ವಿಪಕ್ಷದಲ್ಲಿದ್ದರು. ಕೊಡಗಿನ ವಿಚಾರ ಬಂದಾಗ ಇತರ ಭಿನ್ನಬೇಧ ಮರೆತು ಎಲ್ಲರೂ ಒಂದಾಗಿರುವ ನಿದರ್ಶನಗಳಿವೆ. ಬೇರೆ ಜಿಲ್ಲೆಗಳಲ್ಲಿ ಪ್ರತಿನಿಧಿಗಳು ಪರಸ್ಪರ ಮುಖ ತಿರುಗಿಸುವ ಪರಿಸ್ಥಿತಿಯೂ ಇದೆ ಆದರೆ ಕೊಡಗಿನಲ್ಲಿ ಸಾಮರಸ್ಯವಿದೆ ಎಂದರು.

ಚುನಾವಣೆ ಸಂದರ್ಭದಲ್ಲಷ್ಟೆ ರಾಜಕೀಯ ಹೊರತು ನಂತರದ ದಿನಗಳಲ್ಲಿ ಒಟ್ಟಾಗಿ

(ಮೊದಲ ಪುಟದಿಂದ) ಕೆಲಸ ನಿರ್ವಹಿಸುತ್ತೇವೆ. ಈ ಬಗ್ಗೆ ವೀಣಾ ಅವರೊಂದಿಗೂ ಸಮಾಲೋಚಿಸಿದ್ದು, ಒಂದಾಗಿ ಕೆಲಸ ನಿರ್ವಹಿಸುವದಾಗಿ ಹೇಳಿದರು. ವಿರೋಧ ಪಕ್ಷದ ಸದಸ್ಯರಾಗಿ ವಿರೋಧಕ್ಕಾಗಿ ವಿರೋಧ ಮಾಡದೆ ಅಭಿವೃದ್ಧಿಗೆ ಸಹಕರಿಸುವದಾಗಿ ಹೇಳಿದರು. ವೀಣಾ ಅಚ್ಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಆಧಾರಿತವಾಗಿ ಅಭಿಪ್ರಾಯ ವ್ಯತ್ಯಾಸಗಳಿರಬಹುದು. ಆದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಪ್ರಯತ್ನಿಸುವದಾಗಿ ಹೇಳಿದರು. ಜೆ.ಎ. ಕರುಂಬಯ್ಯ ಅವರ ಅಧೀನದಲ್ಲಿ ಕೆಲಸ ನಿರ್ವಹಿಸಿರುವ ಅನುಭವ ಇದೆ. ಜಿಲ್ಲೆಯ ಜ್ವಲಂತ ಸಮಸ್ಯೆ, ಜನತೆಯ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಾಗಿ ಒಟ್ಟಿಗೆ ಕೈ ಜೋಡಿಸಿ ಕೆಲಸ ನಿರ್ವಹಿಸುವದಾಗಿ ಹೇಳಿದ ಅವರು, ಪಕ್ಷದ ನಾಯಕರು, ಹಿರಿಯರು, ಮುಖ್ಯಮಂತ್ರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಲಾಗುವದು, ಜನತೆಯೂ ಈ ಬಗ್ಗೆ ಸಹಕಾರ ನೀಡಬೇಕೆಂದು ಕೋರಿದರು.

ರಾಜಕೀಯ ಬೇರೆ - ಕೆಲಸ ಬೇರೆ

ಎರಡು ಪಕ್ಷಗಳಿಂದ ಬಿಜೆಪಿ ಮುಕ್ತ ಕೊಡಗು, ಕಾಂಗ್ರೆಸ್ ಮುಕ್ತ ಕೊಡಗು ಎಂಬ ಹೇಳಿಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಮುಖರು ಪಕ್ಷದ ನಿಲುವು- ತೀರ್ಮಾನ ಬೇರೆಯಾಗಿದ್ದು, ಅದಕ್ಕೆ ತಲೆಬಾಗಬೇಕು ಆದರೆ, ಪ್ರತಿನಿಧಿಗಳಾಗಿ ಜನತೆಯ ಕೆಲಸ ಮಾಡಲೇಬೇಕಿದೆ. ಈ ಹಿಂದಿನ ನಾಯಕರೂ ಒಂದೊಂದು ಪಕ್ಷವನ್ನು ಪ್ರತಿನಿಧಿಸುತ್ತಿದ್ದರೂ ಜನತೆಯ ಕೆಲಸ ಮಾಡಿದ್ದಾರೆ ಎಂದರು.

ಯಾವದೇ ಸರಕಾರ ಬರಲಿ ಆದರೆ ಜಿಲ್ಲೆಗೆ ವಿಶೇಷ ಅನುದಾನ ನೀಡಬೇಕು ಎಂದು ಕಾವೇರಿ ನೀರಿನ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸುನಿಲ್ ತಾವು ಈಗಾಗಲೇ ವಿವಿಧ ಸಮಸ್ಯೆ, ಹಲವಾರು ವಿಚಾರಗಳ ಬಗ್ಗೆ ಸಂಬಂಧಿಸಿದ ಇಲಾಖೆ, ಸಚಿವರೊಂದಿಗೆ ವ್ಯವಹರಿಸಿರುವದಾಗಿ ಹೇಳಿದರು.

ಆನೆ - ಮಾನವ ಸಂಘರ್ಷ

ಆನೆ ಮಾನವ ಸಂಘರ್ಷದ ವಿಚಾರದಲ್ಲಿ ಜಿಲ್ಲೆಯ ಪ್ರಮುಖರು ಒಟ್ಟಿಗೆ ಸೇರಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲು ಮುಂದಾಗುವದಾಗಿ ವೀಣಾ ಅಚ್ಚಯ್ಯ ಹೇಳಿದರು. ತಾವು ಈ ಬಗ್ಗೆ ವಿಧಾನ ಪರಿಷತ್‍ನಲ್ಲಿ ಪ್ರಸ್ತಾಪಿಸಿದ್ದು, ಅರಣ್ಯ ಸಚಿವರು ವಿಶೇಷ ಸಭೆಯೊಂದನ್ನು ಕರೆದಿದ್ದ ಕುರಿತು ಸುನಿಲ್ ಸುಬ್ರಮಣಿ ಮಾಹಿತಿಯಿತ್ತರು.

ಜಂಟಿ ಭೇಟಿ

ಕಂದಾಯ ಇಲಾಖಾ ಕಚೇರಿಗಳಲ್ಲಿನ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದ ಸಂದರ್ಭ ಪ್ರತಿಕ್ರಿಯಿಸಿದ ಸುನಿಲ್ ಈ ಬಗ್ಗೆ ತಮಗಳಿಗೂ ಸಾಕಷ್ಟು ದೂರು ಬರುತ್ತಿವೆ. ಕೆಲವು ಕಚೇರಿಗೆ ತಾವಿಬ್ಬರೂ ಜಂಟಿಯಾಗಿ ಭೇಟಿ ನೀಡಿ ಶಾಸಕರ ಸಹಕಾರದೊಂದಿಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾಗುವದಾಗಿ ಹೇಳಿದರಲ್ಲದೆ ಪಂಚಾಯಿತಿ ಭೇಟಿ ಸಂದರ್ಭವೂ ಒಟ್ಟಿಗೆ ಭೇಟಿ ನೀಡಲು ವೀಣಾ ಅವರನ್ನು ಆಹ್ವಾನಿಸುವದಾಗಿ ಹೇಳಿದರು.

ದೇವಟ್‍ಪರಂಬು ವಿವಾದದ ಬಗ್ಗೆ ಈಗಾಗಲೇ ಮೂರುಸುತ್ತಿನ ಚರ್ಚೆ ನಡೆದಿದೆ. ಇದು ಸೂಕ್ಷ್ಮ ವಿಚಾರವಾಗಿದ್ದು, ಇದಕ್ಕೆ ಸೌಹಾರ್ದತೆಯಿಂದ ಅಂತ್ಯ ಹಾಡಲಾಗುವದು ಎಂದು ಸುನಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಸರಾ ಅನುದಾನಕ್ಕೆ ನಿಯೋಗ

ಐತಿಹಾಸಿಕ ದಸರಾ ಆಚರಣೆಗೆ ಈ ಬಾರಿ ಹೆಚ್ಚಿನ ಅನುದಾನಕ್ಕೆ ಕೋರಿ ಸದ್ಯದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವದಾಗಿ ಈ ಕುರಿತು ಕೇಳಿದ ಪ್ರಶ್ನೆಗೆ ವೀಣಾ ಉತ್ತರಿಸಿ ಹೆಚ್ಚು ಅನುದಾನದ ಭರವಸೆಯಿತ್ತರು.

ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ

ಜನತೆಗೆ ನೇರವಾಗಿ ಸ್ಪಂದಿಸಲು ಇಬ್ಬರು ಎಂಎಲ್‍ಸಿಗಳು ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರದಂದು ಲಭ್ಯರಾಗಲಿದ್ದಾರೆ. ಸುನಿಲ್ ಅವರು ತಮ್ಮ ಕಚೇರಿಯಲ್ಲಿ ಹಾಗೂ ವೀಣಾ ಅವರು ನೂತನ ಕಚೇರಿ ಆರಂಭಗೊಳ್ಳುವ ತನಕ ಸುದರ್ಶನ ಅತಿಥಿ ಗೃಹದಲ್ಲಿ ಲಭ್ಯರಿರುವದಾಗಿ ಈ ಸಂದರ್ಭ ಪ್ರಮುಖರು ತಿಳಿಸಿದರು. ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎನ್. ಮನುಶೆಣೈ ನಿರೂಪಿಸಿ, ಹೆಚ್.ಟಿ. ಅನಿಲ್ ವಂದಿಸಿದರು.