ಮಡಿಕೇರಿ, ಡಿ. 14: ವಿಶಿಷ್ಟ ಹಾಗೂ ವಿಭಿನ್ನ ಸಂಸ್ಕøತಿಯನ್ನು ಹೊಂದಿರುವ ಕೊಡಗಿನಲ್ಲಿ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ, ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಹುತ್ತರಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಕೊಡಗಿನ ಸುಗ್ಗಿ ಹಬ್ಬವೆಂದೇ ಕರೆಯಲ್ಪಡುವ ಹುತ್ತರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಜಿಲ್ಲೆಯ ಸಂಘ - ಸಂಸ್ಥೆಗಳು, ದೇವಾಲಯಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಹಬ್ಬ ವಾತಾವರಣ ಕಂಡು ಬಂದಿತು. ಶುಭ ಘಳಿಗೆಯ ನಿಗದಿತ ಸಮಯದಲ್ಲಿ ನೆರೆಕಟ್ಟಿ, ಕದಿರು ತೆಗೆದು, ಪ್ರಸಾದ ವಿನಿಯೋಗ ನಡೆಯಿತು. ಮನೆ - ಮನೆಗಳಲ್ಲಿ ಬಂಧು ಬಳಗದವರೊಂದಿಗೆ ಜನತೆ ಹಬ್ಬದ ಸವಿಯುಂಡು ಸಂಭ್ರಮಪಟ್ಟರು.

ಓಂಕಾರೇಶ್ವರ ಸನ್ನಿಧಿಯಲ್ಲಿ ಹುತ್ತರಿ

ನಗರದ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯ ಸನ್ನಿಧಿ ಮತ್ತು ಸ್ಥಳೀಯ ಕೊಡವ ಸಮಾಜದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.

ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಕೊಡವ ಸಮಾಜದ ಸಂಯುಕ್ತಾ ಶ್ರಯದಲ್ಲಿ (ಮೊದಲ ಪುಟದಿಂದ) ಶ್ರೀ ಓಂಕಾರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀ ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ ಭತ್ತದ ಕದಿರಿಗೆ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಭಟ್ ಪೂಜೆ ಸಲ್ಲಿಸಿ ಕದಿರುಕೊಯ್ದು ಕೋಟೆ ಶ್ರೀ ಮಹಾಗಣಪತಿ ದೇವಾಲಯದವರೆಗೆ ಮೆರವಣಿಗೆ ತೆರಳಿ ಅಲ್ಲಿ ಕೋಟೆ ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಕೊಡವ ಸಮಾಜದ ಪ್ರಮುಖರು ಸಮಾಜದ ಸಭಾಂಗಣಕ್ಕೆ ತೆರಳಿದರು. ಅಲ್ಲಿ ಕದಿರು ಇಟ್ಟು ಪೂಜೆ ಸಲ್ಲಿಸಿದ ಬಳಿಕ ಸಮಾಜ ಬಾಂಧವರಿಗೆ ವಿತರಿಸಲಾಯಿತು. ನೆರೆದಿದ್ದ ಸಮಾಜ ಬಾಂಧವರಿಗೆ ತಂಬಿಟ್ಟು ವಿತರಿಸಲಾಯಿತು.

ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮೆರವಣಿಗೆ ಬಳಿಕ ಭತ್ತದ ಕದಿರಿಗೆ ವಿಶೇಷ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ಕದಿರು ವಿತರಿಸಲಾಯಿತು.

ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್‍ಕುಮಾರ್, ಪಾರುಪತ್ತೆಗಾರ ಚಿ.ನಾ. ಸೋಮೇಶ್ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಡಿಕೇರಿ ಗೌಡ ಸಮಾಜ

ಮಡಿಕೇರಿ ನಗರ ಗೌಡ ನಾಗರಿಕ ಸಮಿತಿ ವತಿಯಿಂದ ಹುತ್ತರಿ ಹಬ್ಬವನ್ನು ಸಮಿತಿಯ ಕಾರ್ಯದರ್ಶಿ ಪರಿವಾರ ಅಪ್ಪಾಜಿ ಅವರ ಮುಂದಾಳತ್ವದಲ್ಲಿ ಆಚರಿಸಲಾಯಿತು. ರಾತ್ರಿ ನೆರೆಕಟ್ಟಿ, ಮೊಟ್ಟೇರ ಬೆಳ್ಯಪ್ಪ ಅವರು ಕದಿರು ತೆಗೆದು ನೆರೆದಿದ್ದ ಸರ್ವರಿಗೂ ನೆರೆಕಟ್ಟಿದ ಕದಿರನ್ನು ವಿತರಿಸಿ, ಲಘು ಉಪಹಾರ ನೀಡಲಾಯಿತು.

ಈ ಸಂದರ್ಭ ಸಮಿತಿಯ ಸಹಕಾರ್ಯದರ್ಶಿ ಕುಟ್ಟನ ತಿಮ್ಮಯ್ಯ, ಖಜಾಂಚಿ ಚೆರಿಯಮನೆ ತಿಮ್ಮಯ್ಯ, ಪದಾಧಿಕಾರಿಗಳಾದ ಪೊನ್ನಚ್ಚನ ಸೋಮಣ್ಣ, ಕುಂಗುಗೌಡನ ಭೀಮಯ್ಯ, ಪಾಣತ್ತಲೆ ಬಿದ್ದಪ್ಪ, ಪೂಜಾರೀರ ಬೆಳ್ಯಪ್ಪ, ಬೈಚನ ಸೋಮಣ್ಣ, ಸೂದನ ಹರೀಶ, ಕೋಡಿ ಮುತ್ತಪ್ಪ, ಪೊನ್ನಚ್ಚನ ಮಧು ಸೋಮಣ್ಣ, ಮೊಟ್ಟೇರ ಬೆಳ್ಯಪ್ಪ, ಪೊನ್ನೇಟಿ ಚಿಣ್ಣಪ್ಪ, ಬೈತಡ್ಕ ಬೆಳ್ಯಪ್ಪ ಮತ್ತು ಅಧಿಕ ಸಂಖ್ಯೆಯಲ್ಲಿ ಜನಾಂಗ ಬಾಂಧವರು ಉಪಸ್ಥಿತರಿದ್ದರು.

ಮೋದೂರಿನಲ್ಲಿ ಹುತ್ತರಿ

ಮಡಿಕೇರಿ ಸಮೀಪದ ಮೋದೂರಿನಲ್ಲಿ ತೋಟದ ಮಾಲೀಕರು ಮತ್ತು ಕಾರ್ಮಿಕರು ಜೊತೆಯಲ್ಲಿ ಹುತ್ತರಿ ಆಚರಿಸಿದರು. ದೀಪ ಹಿಡಿದ ಕಾರ್ಮಿಕರ ಮಕ್ಕಳನ್ನು ಹಿಂಬಾಲಿಸಿ ಗದ್ದೆಗೆ ತೆರಳಿ ಕದಿರು ಕಠಾವು ಮಾಡಲಾಯಿತು. ವಿಧಿ - ವಿಧಾನಗಳಲ್ಲಿ ಮೋದೂರು ತೋಟದ ಮಾಲೀಕ ನಕುಲ್ ಪೂಣಚ್ಚ, ಬಿ.ಜಿ. ಮುತ್ತಣ್ಣ ಹಾಗೂ ಇತರರು ಪಾಲ್ಗೊಂಡರು. ಮನೆಯಲ್ಲಿ ಕುಟುಂಬದ ಹಿರಿಯ ಬಿ.ಕೆ. ಸುಬ್ಬಯ್ಯ ಅವರು ಕದಿರು ಸ್ವೀಕರಿಸಿ, ಹೊಸ ಅಕ್ಕಿಯೊಂದಿಗೆ ಪೂಜೆ ಸಲ್ಲಿಸಿದರು. ಸೀತಾ ಸುಬ್ಬಯ್ಯ, ನೀನಾ ಮುತ್ತಣ್ಣ, ಪ್ಯಾರೀಸಿನ ರೋಜ್ ಮೇರಿ, ಬೆಂಗಳೂರಿನ ಪ್ರತಾಪ್ ರೆಡ್ಡಿ, ಡಾ. ನರೇನ್ ಹಾಗೂ ಇತರರು ಹಬ್ಬದಲ್ಲಿ ಪಾಲ್ಗೊಂಡರು.

ವೀರಾಜಪೇಟೆ

ಇಲ್ಲಿನ ಕೊಡವ ಸಮಾಜದಿಂದ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ರಾತ್ರಿ ಕೋವಿ ಇತರ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ನೆಲ್ಲಕ್ಕಿ ತೂಕ್ ಬೊಳಕ್‍ಗೆ ಪ್ರಾರ್ಥಿಸಿ ನೆರೆ ಕಟ್ಟಲಾಯಿತು.

ಬಳಿಕ ಕೊಡವ ಸಮಾಜ ಕಟ್ಟಡದ ಪಕ್ಕದಲ್ಲಿ ಗದ್ದೆಗೆ ಸಮುದಾಯ ಬಾಂಧವರು ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿ ಕದಿರನ್ನು ತೆಗೆಯಲಾಯಿತು. ಕದಿರು ತೆಗೆದ ನಂತರ ಕೊಡವ ಸಮಾಜದ ಸಭಾಂಗಣಕ್ಕೆ ತೆರಳಿ ಅಲ್ಲಿ ಕದಿರಿಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕೊಡವ ಸಮಾಜದ ಹಿರಿಯರಾದ ನಾಯಡ ವಾಸು ನಂಜಪ್ಪ, ಕೂತಂಡ ನಾಣಯ್ಯ, ಅಲ್ಲಪಂಡ ಚಿಣ್ಣಪ್ಪ, ಕುಲ್ಲಚಂಡ ಪೂಣಚ್ಚ, ಕನ್ನಂಬೀರ ಬೆಳ್ಳಿಯಪ್ಪ, ಬಿ.ಆಶಾ ಸುಬ್ಬಯ್ಯ, ಮುಕ್ಕಾಟಿರ ದಮಯಂತಿ, ಪಟ್ರಪಂಡ ಗೀತಾ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.

ಮೂರ್ನಾಡು-ಹೊದ್ದೂರು

ಹೊದ್ದೂರುವಿನಲ್ಲಿ ಜನತೆ ಸುಗ್ಗಿ ಹಬ್ಬ “ಪುತ್ತರಿ”ಯನ್ನು ಸಂಭ್ರಮ ಸಡಗರÀ, ಶ್ರದ್ಧಾಭಕ್ತಿಯಿಂದ ಆಚರಿಸಿದರು. ಸಂಜೆ ತುಂತುರು ಮಳೆಯ ನಡುವೆಯೇ ಶ್ರೀಸಾರ್ತಾವು- ಅಯ್ಯಪ್ಪ ದೇವಾಲಯದಲ್ಲಿ “ಎತ್ತುಪೋರಾಟ” ನಡೆಯಿತು. ಬಳಿಕ ದೇವರಿಗೆ ನೈವೇದ್ಯ ಸಮರ್ಪಣೆ- ವಿಶೇಷ ಪೂಜೆ, ಪ್ರಸಾದ ವಿನಿಯೋಗ ಇತ್ಯಾದಿ ಕೈಂಕರ್ಯಗಳು ನೆರವೇರಿದವು.

ಹೊದ್ದೂರು ಗ್ರಾಮದ ವಿವಿಧ ಕುಟುಂಬಸ್ಥರು ತಮ್ಮ ಕುಟುಂಬಗಳಿಗೆ ಸೇರಿದ ಗದ್ದೆಗಳಲ್ಲಿ ಭತ್ತದ ಪೈರಿಗೆ ಪೂಜೆ ಸಲ್ಲಿಸಿ, ಕದಿರು ಕೊಯ್ದರು. ನಂತರ ಶ್ರೀಮಹಾದೇವ, ಭಗವತಿ, ಸಾರ್ತವು, ಅಯ್ಯಪ್ಪ ಮುಂತಾದ ದೇವರಿಗೆ “ದೇವಕದ್” ಸಮರ್ಪಿಸಿದರು. ಬಳಿಕ ಗುರುಮನೆಗಳಿಗೆ ತೆರಳಿ ಭತ್ತದ ತೆನೆಗಳನ್ನು ಗುರುಕಾರೋಣರಿಗೆ ಅರ್ಪಿಸಲಾಯಿತು. ಆನಂತರ ಸಾಮೂಹಿಕ ಭೋಜನ ನಡೆಯಿತು. ಮುಂಜಾನೆ ಮೂರು ಗಂಟೆಯ ಅಸುಪಾಸಿನಲ್ಲಿ ಆರಂಭವಾದ ತುಂತುರು ಮಳೆ ದಿನವಿಡೀ ಸುರಿಯಿತು. ಇದು ಜನತೆಯ ಹಬ್ಬದ ಉತ್ಸಾಹವನ್ನು ಸಂಪೂರ್ಣ ಕುಗ್ಗಿಸಿತ್ತು ಎನ್ನಬಹುದು.

ಗೋಣಿಕೊಪ್ಪಲು

ಹುತ್ತರಿ ಹಬ್ಬದ ಪ್ರಯುಕ್ತ ಶ್ರೀ ಉಮಾಮಹೇಶ್ವರಿ ದೇವಸ್ಥಾನ ವತಿಯಿಂದ ಪಾಲಿಬೆಟ್ಟ ರಸ್ತೆ ತಿರುವಿನ ಮನೆಯಪಂಡ ಮೆ. ಬೋಪಣ್ಣ ಅವರ ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಕದಿರು ತೆಗೆಯಲಾಯಿತು.

ಇಗ್ಗುತ್ತಪ್ಪ ಕೊಡವ ಸಂಘ, ಪೊನ್ನಂಪೇಟೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನ, ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಪೊನ್ನಂಪೇಟೆ ಕೊಡವ ಸಮಾಜ ವತಿಯಿಂದ ಕದಿರು ತೆಗೆಯುವ ಆಚರಣೆ ನಡೆಸಲಾಯಿತು.

ವರ್ಧ ಚಂಡಮಾರುತದ ಹಿನ್ನೆಲೆ ಕೊಡಗಿನಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮಳೆ ಕಾಣಿಸಿಕೊಂಡು, ಇದೇ ಮೊದಲ ಬಾರಿಗೆ ಹುತ್ತರಿ ಹಬ್ಬದ ಸಂಭ್ರಮಕ್ಕೆ ತೊಡಕು ತಂದಿದೆ. ಮಳೆಯ ನಡುವೆಯೇ ಜನರು, ಸಂಘ ಸಂಸ್ಥೆಗಳು, ದೇವಸ್ಥಾನಗಳಲ್ಲಿ ಕದಿರು ತೆಗೆಯುವ ಸಂಪ್ರದಾಯವನ್ನು ನಡೆಸಿದ್ದಾರೆ.

ಜಿಟಿಜಿಟಿ ಸುರಿಯುವ ಮಳೆಯ ನಡುವೆಯೇ ಕೊಡೆ ಹಿಡಿದು ಕದಿರು ತೆಗೆಯುವ ಸಂಪ್ರದಾಯಕ್ಕೆ ಹಿರಿಯರು ಮುಂದಾದರೆ, ಕಿರಿಯರು ಪಟಾಕಿ ಸಿಡಿಸುವ ಉತ್ಸಾಹಕ್ಕೆ ವರ್ಧ ಅಡ್ಡಿ ಪಡಿಸಿದೆ. ಹೀಗಾಗಿ ಈ ಬಾರಿ ಪಟಾಕಿ ಶಬ್ದ ಕ್ಷೀಣಿಸಿದೆ.

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಅಧ್ಯಕ್ಷ ಚೆಪ್ಪುಡಿರ ತಮ್ಮು ದೇವಯ್ಯ ಖಜಾಂಜಿ ಜಪ್ಪೆಕೊಡಿ ರಾಜ ಉತ್ತಪ್ಪ, ನಿರ್ದೇಶಕರುಗಳಾದ ಕೊಪ್ಪಿರ ಸನ್ನಿ ಸೋಮಯ್ಯ, ಕುಲ್ಲಂಚಂಡ ಪ್ರಮೋದ್ ಗಣಪತಿ, ಪಿ.ವಿ.ಶೋಬಿತ್, ವ್ಯವಸ್ಥಾಪಕ ಮಧು, ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷಿಣಿ ಕೊಣಿಯಂಡ ಬೋಜಮ್ಮ, ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಅಧ್ಯಕ್ಷ ಚಮ್ಮಟಿರ ಡಿಕ್ಕಿ ಕುಶಾಲಪ್ಪ, ಕಾರ್ಯದರ್ಶಿ ಮೂಕಳೇರ ನಂದಾ ಪೂಣಚ್ಚ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ಬಸವೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕದಿರು ತೆಗೆಯುವ ಸಂಪ್ರದಾಯ ಆಚರಣೆಯನ್ನು ನಡೆಸಿದರು.

ಶ್ರೀಮಂಗಲ

ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಪುತ್ತರಿ ನಮ್ಮೆಯನ್ನು ಸಡಗರ ಸಂಭ್ರಮದೊಂದಿಗೆ ಜಿಲ್ಲೆಯ ಕೃಷಿ ಕುಟುಂಬಗಳು ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ಮೊದಲು ನಾಡಿನ ಪ್ರಮುಖ ದೇವಾಲಯ, ಐನ್‍ಮನೆಗಳಲ್ಲಿಯೂ ಸಾಮೂಹಿಕವಾಗಿ ಆಚರಣೆ ಮಾಡಿದರು.

ರಾಜ್ಯದ ಏಕೈಕ ದೇವಾಲಯವೆಂದು ಪ್ರಸಿದ್ಧವಾಗಿರುವ ಬಾಡಗರಕೇರಿಯ ಮೃತ್ಯುಂಜಯ ದೇವಾಲಯದಲ್ಲಿ ನಾಡಿನ ಜನತೆ ಸಾಮೂಹಿಕವಾಗಿ ಕದಿರು ತೆಗೆದು ದೇವರಿಗೆ ಅರ್ಪಿಸಿದರು. ನಾಡಿನ ದೇವರಿಗೆ ಕದಿರು ತೆಗೆದ ನಂತರ ತಮ್ಮ ಮನೆಗಳಲ್ಲಿ ಪದ್ಧತಿಯಂತೆ ಕದಿರು ತೆಗೆದು ಸಂಭ್ರಮಿಸಿದರು.

ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದಲ್ಲಿ ನಾಡುತಕ್ಕ, ದೇವತಕ್ಕ, ಊರಿನ ಹಿರಿಯರು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ನಾಡಿನ ಜನತೆಯೊಂದಿಗೆ ನೂರಾರು ಜನರು ಭಾಗವಹಿಸಿದ್ದದ್ದು ವಿಶೇಷವಾಗಿತ್ತು.

ನಾಡುತಕ್ಕ ಕಾಯಪಂಡ ಕುಟುಂಬಸ್ಥರು, ದೇವತಕ್ಕರಾದ ಅಣ್ಣೀರ ಕುಟುಂಬಸ್ಥರು ಸಾಂಪ್ರಾದಾಯಿಕ ಕೊಡವ ಉಡುಪಿನೊಂದಿಗೆ ಗದ್ದೆಗೆ ತೆರಳಿ ನೂರಾರು ನಾಡಿನ ಜನರೊಂದಿಗೆ “ಪೊಲಿ ಪೊಲಿ ದೇವಾ” ಘೋಷಣೆಯೊಂದಿಗೆ, ಪಟಾಕಿ ಸಿಡಿಸಿ ಕದಿರು ತಂದರು. ಈ ಸಂದರ್ಭ ಜಿಲ್ಲೆಯ ಹೊರಗಿನಿಂದ ಬಂದ ಭಕ್ತಾದಿಗಳು ಸಹ ಪಾಲ್ಗೊಂಡಿದ್ದರು. ಕದಿರು ತೆಗೆಯುವ ಸಮಯದಲ್ಲಿ ಮಳೆ ಇದ್ದರೂ ಮಳೆಯಲ್ಲಿಯೇ ಸಾಂಪ್ರಾದಾಯಿಕವಾಗಿ ಹಬ್ಬ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

ಪದ್ಧತಿಯಂತೆ ಮಲ್ಲೇಂಗಡ ಕುಟುಂಬದ ಹಿರಿಯರಾದ ಪೆಮ್ಮಯ್ಯ ಅವರ ಗದ್ದೆಯಲ್ಲಿ ಸ್ವತ: ಪೆಮ್ಮಯ್ಯರವರು ದೇವರಿಗೆ ಕದಿರು ಕುಯ್ದರು.

ಈ ಸಂದರ್ಭ ನಾಡ್‍ತಕ್ಕರಾದ ಕಾಯಪಂಡ ರಾಜು, ಅಯ್ಯಪ್ಪ, ದೇವತಕ್ಕರಾದ ಅಣ್ಣೀರ ದಾದಾ ಗಣಪತಿ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಚೋನೀರ ಸುಬ್ರಮಣಿ, ಕಾರ್ಯದರ್ಶಿ ಅಮ್ಮತ್ತಿರ ಚಂದ್ರಶೇಕರ್ ಮತ್ತು ಪಧಾದಿಕಾರಿಗಳು, ಅರ್ಚಕರಾದ ಗಿರೀಶ್, ಹರೀಶ್ ಮತ್ತಿತರರಿದ್ದರು.

ವರುಣನÀ ಕೃಪೆ

ಮುಂಜಾನೆಯಿಂದ ಎಡೆಬಿಡದೆ ಸುರಿಯಲಾರಂಭಿಸಿದ ಮಳೆ ಜನರ ನೆಮ್ಮದಿ ಕೆಡಿಸಿತ್ತು. ಹೇಗಪ್ಪಾ ಗದ್ದೆಯಿಂದ ಕದಿರು ಕೊಯ್ದು ತರುವದು ಎಂಬ ಚಿಂತೆಯಲ್ಲಿದ್ದವರಿಗೆ ಸಂಜೆ 6 ಗಂಟೆ ಸಮಯದಲ್ಲಿ ವರುಣನ ಕೃಪೆ ಎಂಬ ಮಳೆ ಒಡನೆ ಬಿಡವು ನೀಡಿತ್ತು. ನಂತರ ಕದಿರು ಕೊಯ್ದು ಎಲ್ಲರೂ ಮನೆ ಸೇರಿದ ಮೇಲೆ ಮತ್ತೆ ಮಳೆ ಆರಂಭವಾಯಿತು.

ಕುಶಾಲನಗರ: ಕುಶಾಲನಗರದ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬ ಆಚರಣೆ ನಡೆಯಿತು. ಸಮಾಜ ಬಾಂಧವರು ಗೌಡ ಸಮಾಜದಲ್ಲಿ ಸಂಜೆ ಸೇರಿ ನೆರೆಕಟ್ಟಿ ನಂತರ ಮೆರವಣಿಗೆಯಲ್ಲಿ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಬೈಮನ ವಿಜಯಲಕ್ಷ್ಮಿ ವಿಶ್ವನಾಥ್ ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಈ ಸಂದರ್ಭ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೂಡ ಕದಿರು ಒಯ್ಯಲು ಕಾತರದಿಂದ ಕಾಯುತ್ತಿದ್ದ ದೃಶ್ಯ ಗೋಚರಿಸಿತು. ಸ್ಥಳದಲ್ಲಿಯೇ ಗೌಡ ಸಮಾಜ ವತಿಯಿಂದ ಸಮುದಾಯ ಬಾಂಧವರಿಗೆ ಹಾಗೂ ಸಾರ್ವಜನಿಕ ಬಾಂಧವರಿಗೆ ಕದಿರು ವಿತರಿಸಲಾಯಿತು. ಕದಿರು ಗುತ್ತಿಪೂಜೆಯನ್ನು ಕುಲ್ಲಚೆಟ್ಟಿ ಕಾಶಿಪೂವಯ್ಯ, ನೆರÀವೇರಿಸಿದರು. ಪಟಾಕಿ, ಸಿಡಿಮದ್ದುಗಳ ಭರಾಟೆಯೊಂದಿಗೆ ಹುತ್ತರಿ ಹಬ್ಬ ಸಾಂಪ್ರದಾಯಿಕವಾಗಿ ನಡೆಯಿತು

ಈ ಸಂದರ್ಭ ಗೌಡ ಸಮಾಜ ಅಧ್ಯಕ್ಷ ಕೇಚಪ್ಪನ ಮೋಹನ್, ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಕಾರ್ಯದರ್ಶಿ ಬೈಮನ ಪೊನ್ನಪ್ಪ, ಹಾಲುಗುಂಜ ಕೃಷ್ಣಮೂರ್ತಿ, ಪಟ್ಟಂದಿ ಬೀನಾ ಸೀತಾರಾಮ್, ನಿರ್ದೇಶಕರುಗಳಾದ ಚೆರಿಯಮನೆ ಹರೀಶ್, ಚೀಯಂಡಿ ಶಾಂತಿ, ಕೂರನ ಪ್ರಕಾಶ್, ಮುದ್ಯನ ವಿಜಯಕುಮಾರ್, ಪೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಕವಿತಾ ಮೋಹನ್ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸ್ವಸಹಾಯ ಸಂಘ ಒಕ್ಕೂಟ, ಮಹಿಳಾ ಘಟಕದ ಸದಸ್ಯರು ಇದ್ದರು.

ಕುಶಾಲನಗರ ಕೊಡವ ಸಮಾಜದ ವತಿಯಿಂದ ನಡೆದ ಪುತ್ತರಿ ನಮ್ಮೆ ಸ್ಥಳೀಯ ಕೊಡವ ಸಮಾಜ ಆವರಣದಲ್ಲಿ ನಡೆಯಿತು. ಸಮಾಜದ ಆವರಣದಲ್ಲಿ ಸಂಜೆ ನೆರೆಕಟ್ಟಿ ಪ್ರಾರ್ಥನೆ ನಂತರ ಸಮಾಜದ ಹಿರಿಯರಾದ ಬಲ್ಲಾರಂಡ ಜಾಲಿ ತಮ್ಮಯ್ಯ ಸಾಂಪ್ರದಾಯಿಕವಾಗಿ ಕದಿರು ತೆಗೆದು ನಂತರ ಸಮುದಾಯ ಬಾಂಧವರಿಗೆ ವಿತರಿಸಲಾಯಿತು.

ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ಪುಲಿಯಂಡ ಚಂಗಪ್ಪ, ಜಂಟಿ ಕಾರ್ಯದರ್ಶಿ ಪಾಳಚಂಡ ವಿಜು, ಖಜಾಂಚಿ ಗೌಡಂಡ ಗಣೇಶ್ ದೇವಯ್ಯ, ನಿರ್ದೇಶಕರುಗಳು ಸೇರಿದಂತೆ

ಸಮಾಜದ ಪ್ರಮುಖರು ಇದ್ದರು.

ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬವನ್ನು ಸೋಮವಾರಪೇಟೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಹವಾಮಾನ ವೈಪರಿತ್ಯದಿಂದಾಗಿ ಮಳೆಯ ಸಿಂಚನವಾಗುತ್ತಿದ್ದರೂ ಸಹ ಗ್ರಾಮೀಣ ಭಾಗದಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಿದರು.

ಗದ್ದೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಕೊಂಡರು. ಇಲ್ಲಿನ ಕೊಡವ ಸಮಾಜದಿಂದ ಆಂಜನೇಯ ದೇವಾಲಯದ ಬಳಿಯಿರುವ ಗದ್ದೆಯಲ್ಲಿ ಕದಿರು ತೆಗೆಯುವ ಮೂಲಕ ಹುತ್ತರಿ ಆಚರಿಸಲಾಯಿತು. ಗದ್ದೆಯಿಂದ ತೆಗೆದುಕೊಂಡು ಬಂದ ಕದಿರನ್ನು ಕೊಡವ ಸಮಾಜದಲ್ಲಿ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ವಿತರಿಸಲಾಯಿತು.

ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಹುತ್ತರಿ ಸಂಭ್ರಮ ಹೆಚ್ಚಾಗಿ ಕಂಡುಬಂತು. ತಾಲೂಕಿನ ಅಬ್ಬೂರುಕಟ್ಟೆ, ನೇರುಗಳಲೆ, ಗರ್ವಾಲೆ, ಸೂರ್ಲಬ್ಬಿ, ತಾಕೇರಿ, ಕಿರಗಂದೂರು, ಶಾಂತಳ್ಳಿ, ಆಲೂರುಸಿದ್ದಾಪುರ, ಬಾಣಾವರ ಸೇರಿದಂತೆ ಇತರೆಡೆಗಳಲ್ಲಿ ಹುತ್ತರಿ ಆಚರಿಸಲಾಯಿತು.